ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಮೀಸಲಾತಿ ಕಾಲ ಸನ್ನಿಹಿತ: ವೆಂಕಯ್ಯ ನಾಯ್ಡು ಅಭಿಮತ

Last Updated 31 ಆಗಸ್ಟ್ 2018, 12:50 IST
ಅಕ್ಷರ ಗಾತ್ರ

ಬೀದರ್‌: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಇರುವ ಮೀಸಲಾತಿ ಮಾದರಿಯಲ್ಲೇ ರೈತರಿಗೂ ಮೀಸಲಾತಿ ಕೊಡುವ ಕಾಲ ಸನ್ನಿಹಿತವಾಗಿದೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 10ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

‘ರೈತರಿಗೆ ಮೀಸಲಾತಿ, ಸಂಪನ್ಮೂಲ ಅಥವಾ ಹೆಚ್ಚುವರಿ ಸೌಲಭ್ಯ–ಇವುಗಳಲ್ಲಿ ಯಾವುದಾದರೂ ಸರಿ, ಒಟ್ಟಾರೆ ಕೃಷಿ ಕ್ಷೇತ್ರ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒತ್ತು ಕೊಡಬೇಕು. ಕೃಷಿ ಹಾಗೂ ಪಶು ಸಂಪತ್ತು ಹೆಚ್ಚಿಸಲು ಸಂಪನ್ಮೂಲವನ್ನು ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

ಪದಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಹೆಚ್ಚು ಪದಕ ಪಡೆದವರಲ್ಲಿ ಹೆಣ್ಣು ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

‘ಹೆಣ್ಣು ಮಕ್ಕಳು ಸಂಪ್ರದಾಯದ ವಾಹಕರಾಗಿದ್ದಾರೆ. ದೇಶದಲ್ಲಿ ನದಿಗಳಿಗೆ ಹೆಣ್ಣಿನ ಹೆಸರಿಡಲಾಗಿದೆ. ಪುರಾಣಗಳಲ್ಲೂ ಹೆಣ್ಣುಮಕ್ಕಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಪಂಚಾಯಿತಿಗಳಲ್ಲಿ ಮಹಿಳೆಗೆ ಅಧಿಕಾರ ಕಲ್ಪಿಸಿದ ನಂತರ ಪತಿಯ ಗತಿ ಬದಲಾಗಿದೆ. ಕಾರಣ ಮಹಿಳೆಯರು ರಾಜಕೀಯವಾಗಿಯೂ ಸಬಲರಾಗುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ನಮ್ಮಲ್ಲಿರುವ ಪ್ರತಿಭೆಗಳಿಂದಾಗಿಯೇ ಪಾಶ್ಚಿಮಾತ್ಯ ರಾಷ್ಟ್ರದವರು ಇಲ್ಲಿಗೆ ಬರುತ್ತಿದ್ದಾರೆ. ವಿದೇಶದಲ್ಲಿರುವ ಭಾರತೀಯರು ಸ್ವದೇಶಕ್ಕೆ ಮರಳಿ ಇಲ್ಲಿಯೇಸೇವೆ ಸಲ್ಲಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ನಡುವಿನ ಅಂತರವನ್ನು ಅಭಿವೃದ್ಧಿಯ ಮೂಲಕ ಕಡಿಮೆ ಮಾಡಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಹಾಸನದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಅಶೋಕ 11, ಬೀದರ್‌ನ ಪಶು ವೈದ್ಯಕೀಯ ಕಾಲೇಜಿನ ರಾಮಕುಮಾರ್ 8 ಹಾಗೂ ಬೆಂಗಳೂರಿನ ಹೈನು ವಿಜ್ಞಾನ ಕಾಲೇಜಿನ ಬಸವಪ್ರಭು ಎಚ್.ಎನ್ 5 ಚಿನ್ನದ ಪದಕ ಪಡೆದರು.

309 ಸ್ನಾತಕ ಪದವೀಧರರು ಸೇರಿ ಒಟ್ಟು 447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಹ ಕುಲಾಧಿಪತಿ, ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ, ರಿಜಿಸ್ಟ್ರಾರ್ ಶಿವಶಂಕರ ಉಸ್ತುರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT