ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ಚುನಾವಣೆ ಗೆಲುವಿಗೆ ಸಂಕಲ್ಪ ಮಾಡಿ: ಕೇಂದ್ರ ಸಚಿವ ಭಗವಂತ ಖೂಬಾ ಕರೆ

ಭಾಲ್ಕಿ: ಜನಾಶೀರ್ವಾದ ಯಾತ್ರೆಯಲ್ಲಿ ಕಾರ್ಯಕರ್ತರಿಗೆ
Last Updated 27 ಆಗಸ್ಟ್ 2021, 2:35 IST
ಅಕ್ಷರ ಗಾತ್ರ

ಭಾಲ್ಕಿ: ಮುಂಬರುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ತೊಡಬೇಕು. ಈ ಗೆಲುವು ಸಮಾಜದ ಎಲ್ಲ ವರ್ಗಗಳ ಜನರ ಗೆಲುವು ಆಗಿರುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಪಟ್ಟಣದ ಶಿವಾಜಿ ವೃತ್ತ ಸಮೀಪದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಗುರುವಾರ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಸರ್ಕಾರದ ವಸತಿ ಮನೆಗಳು, ಭಾಗ್ಯಲಕ್ಷ್ಮಿ, ಕೃಷಿ ಸೇರಿ ನಾನಾ ಯೋಜನೆಗಳು ಕಾಂಗ್ರೆಸ್ ಕಾರ್ಯಕರ್ತರ ಪಾಲಾಗುತ್ತಿವೆ. ಬಡ ಜನರು, ಅರ್ಹರು ಸರ್ಕಾರದ ಯೋಜನೆಗಳಿಂದ ವಂಚಿತ ರಾಗುತ್ತಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಟೆಂಡರ್ ವಿಷಯದಲ್ಲಿ ಶಾಸಕರು ಮಧ್ಯ ಪ್ರವೇಶಿಸಿ ತಮಗೆ ಬೇಕಾದವರಿಗೆ ಕೆಲಸ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈಶ್ವರ ಖಂಡ್ರೆ ಸಚಿವರಾಗುತ್ತಲೇ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಟೆಂಡರ್ ಆಗಿದ್ದ ₹48 ಕೋಟಿ ಕುಡಿಯುವ ನೀರಿನ ಯೋಜನೆ ಕಾಮಗಾರಿ, ಬೀದರ್ ರಿಂಗ್ ರೋಡ್ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳ ರದ್ದು ಪಡಿಸಿದರು. ಜತೆಗೆ ವಸತಿ ಯೋಜನೆಯಡಿ ಮನೆ ಹಂಚಿಕೆ ಮತ್ತಿತರ ಯೋಜನೆಗಳನ್ನು ಬೇಕಾಬಿಟ್ಟಿ ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದರು. ಭಾಲ್ಕಿ ಕ್ಷೇತ್ರದ ಜನರು ರೋಸಿ ಹೋಗಿದ್ದು, ಬದಲಾವಣೆ ಬಯಸಿದ್ದಾರೆ. ಎಲ್ಲರೂ ಒಗ್ಗಾಟ್ಟಾಗಿ ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು ಎಂದರು.

ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ದೇಶದ ಒಳಿತಿಗಾಗಿ 136 ಯೋಜನೆಗಳು ಜಾರಿ ತಂದಿದ್ದು, ದೇಶದ 80 ಕೋಟಿ ಜನರು ಕೇಂದ್ರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಸುಗಮವಾಗಿ ಅಧಿವೇಶನ ನಡೆಸಲು ಬೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಈಗಾಗಲೇ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಹೀಗೆ ಮುಂದುವರೆದರೇ ಬರುವ ದಿನಗಳಲ್ಲಿ ನೆಲ ಕಚ್ಚಲಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿ, ಖೂಬಾ ಅವರು ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿಪರ ಕೆಲಸ, ಪಕ್ಷ ನಿಷ್ಠೆ ಮತ್ತು ನಿಸ್ವಾರ್ಥ ಸೇವೆ ಪರಿಣಾಮ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ ಎಂದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವನಾಂದ ಮಂಠಾಳಕರ್, ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್, ಶಿವರಾಜ ಗಂದಗೆ, ಜೈಕುಮಾರ ಕಾಂಗೆ, ಅರಿಹಂತ ಸಾವಳೆ, ಪಂಡಿತ ಶೆಡೋಳೆ, ಜನಾರ್ದನ ಬಿರಾದಾರ್, ಅಶೋಕ ಹೊಕ್ರಾಣೆ, ವಿಶ್ವನಾಥ ಪಾಟೀಲ, ಪ್ರಕಾಶ ಟೊಣ್ಣೆ, ಬಾಬುರಾವ್‌ ಕಾರಬಾರಿ, ಶಾಂತವೀರ ಕೇಸ್ಕರ್, ಮಲ್ಲಿಕಾರ್ಜುನ ಖೂಬಾ, ಸುರೇಶ ಬಿರಾದಾರ, ರಾಮರಾವ ವರವಟ್ಟಿಕರ್, ವೀರಣ್ಣ ಕಾರಬಾರಿ, ರಾಚಪ್ಪ ಪಾಟೀಲ, ಮಹಿಳಾ ಮೋರ್ಚಾ ದ ಅಧ್ಯಕ್ಷೆ ಲುಂಬಿಣಿ ಗೌತಮ ಇದ್ದರು.

ಸ್ವಪ್ರತಿಷ್ಠೆಗಾಗಿ ಜನಾಶೀರ್ವಾದ ಯಾತ್ರೆ; ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಭಾಲ್ಕಿ: ಜಿಲ್ಲೆಯ ಜನರು ಕೊರೊನಾ ಸೋಂಕಿನಿಂದ ದೂರವಾಗಿ ನೆಮ್ಮದಿಯಿಂದ ಬದುಕಲು ಪ್ರಯತ್ನಿಸುತ್ತಿರುವಾಗ ಯಾವ ಪುರುಷಾರ್ಥಕ್ಕಾಗಿ ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಮುಖರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ಕೇವಲ ಸ್ವಪ್ರತಿಷ್ಠೆಗಾಗಿ ಜಿಲ್ಲೆಯ ನಂತರ ತಾಲ್ಲೂಕು ಮಟ್ಟದಲ್ಲಿ ಕೊರೊನಾ ಹರಡಿಸಲು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದೀರಿ. ಸಚಿವರಿಗೊಂದು, ಬಡವರಿಗೊಂದು ಕಾನೂನು ಇದೆಯಾ? ನಿಮ್ಮ ಬೇಜವಬ್ದಾರಿತನ, ತಪ್ಪಿನಿಂದ ಬೀದರ್‌ನಿಂದ ಸಿಪೆಟ್ ಕಾಲೇಜು ಕೈತಪ್ಪಿತು. ಖಾನಾಪೂರ ಪಿಟ್‍ಲೈನ್‌ ಕೆಲಸ ನಿಂತು ಹೋಗಿದೆ. ಬೀದರ್‌- ಭಾಲ್ಕಿ ಹೆದ್ದಾರಿ ಕೆಲಸ ಪ್ರಾರಂಭವಾಗಿ ಐದು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಕಳಪೆ ಕಾಮಗಾರಿ ನಡೆಯುತ್ತಿದ್ದು ಯಾರು ಕೇಳುವರಿಲ್ಲದ ಪರಿಸ್ಥಿತಿ ಬಂದಿದೆ ಎಂದು ಪ್ರಮುಖರಾದ ಹಣಮಂತರಾವ್‌ ಚವ್ಹಾಣ, ಅಬ್ದುಲ್‌ ನಸೀರ್‌, ಟಿಂಕು ರಾಜಭವನ, ಜೈಪಾಲ ಬೊರೊಳೆ ಪ್ರಕಟಣೆಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT