ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ | ಜೀವ ನದಿ ಮಾಂಜ್ರಾ ಬರಿದು, ಕುಡಿಯುವ ನೀರಿನ ಸಮಸ್ಯೆ

Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಜನವಾಡ: ಜಿಲ್ಲೆಯ ಜೀವ ನದಿ ಮಾಂಜ್ರಾ ಬತ್ತಿ ಹೋಗಿರುವ ಕಾರಣ ಬೀದರ್ ತಾಲ್ಲೂಕಿನಲ್ಲಿ ನದಿ ದಡದಲ್ಲಿ ಇರುವ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

ಚಿಲ್ಲರ್ಗಿ, ಚಿಮಕೋಡ್, ಜಾಂಪಾಡ, ಅಮದಲ್‍ಪಡ, ನ್ಯಾಮತಾಬಾದ್, ಕಾಪಲಾಪುರ, ಮಾಳೆಗಾಂವ್ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ನದಿ ತಳ ಕಂಡಿರುವ ಕಾರಣ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಆಳಕ್ಕೆ ಕುಸಿದಿದೆ. ಕೊಳವೆಬಾವಿಗಳಲ್ಲಿ ನೀರು ಬಿಟ್ಟು ಬಿಟ್ಟು ಬರುತ್ತಿದೆ. ಹೀಗಾಗಿ ಕೊಡ ನೀರಿಗಾಗಿ ಜನ ಗಂಟೆಗಟ್ಟಲೇ ಕೊಳವೆಬಾವಿಗಳ ಮುಂದೆ ನಿಲ್ಲಬೇಕಾದ ಸ್ಥಿತಿ ಇದೆ.

‘ಚಿಲ್ಲರ್ಗಿ ಪ್ರದೇಶದಲ್ಲಿ ಫಲವತ್ತಾದ ಭೂಮಿ ಇದೆ. ಇಲ್ಲಿ ತೆರೆದ ಬಾವಿಗಳು ಇಲ್ಲ. ನೀರಾವರಿ, ಕುಡಿಯುವ ನೀರಿಗೆ ಕೊಳವೆಬಾವಿಗಳನ್ನೇ ಅವಲಂಬಿಸಬೇಕಾಗಿದೆ. ಮೂರು ತಿಂಗಳ ಹಿಂದೆಯೇ ಮಾಂಜ್ರಾ ನದಿ ಒಣಗಿರುವುದರಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಬಹಳ ಕಡಿಮೆಯಾಗಿದೆ. ನದಿ ದಂಡೆ ಮೇಲಿರುವ ಸುತ್ತಮುತ್ತಲ ಗ್ರಾಮಗಳ ಸ್ಥಿತಿಯೂ ಇದೇ ಆಗಿದೆ’ ಎಂದು ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದರು.

‘ಗ್ರಾಮದಲ್ಲಿ ಸುಮಾರು 15 ತೆರೆದ ಬಾವಿಗಳು ಇವೆ. ಈ ಪೈಕಿ ನಾಲ್ಕು ಮಾತ್ರ ಚಾಲ್ತಿಯಲ್ಲಿ ಇವೆ. ಅವು ಕೂಡ ಗ್ಯಾಪ್ ಕೊಡುತ್ತಿರುವ ಕಾರಣ ಜನ ನೀರಿಗಾಗಿ ಪರದಾಟ ನಡೆಸಬೇಕಿದೆ’ ಎಂದು ತಿಳಿಸಿದರು.

‘ನೀರಿಗಾಗಿ ಜನ ಕೊಳವೆಬಾವಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಬೇರೆ ಕೆಲಸಗಳನ್ನು ಬದಿಗಿರಿಸಿ, ಗಂಟೆಗಟ್ಟಲೇ ನಿಂತುಕೊಂಡು ನೀರು ಒಯ್ಯುತ್ತಿದ್ದಾರೆ. ರಾತ್ರಿ 11 ಗಂಟೆವರೆಗೂ ಕೊಳವೆಬಾವಿಗಳ ಮುಂದೆ ಜನರ ಸಾಲು ಕಂಡು ಬರುತ್ತಿದೆ’ ಎಂದು ಮಾಹಿತಿ ನೀಡಿದರು.

‘ನೀರಿಗಾಗಿ ಕೆಲವೊಮ್ಮೆ ಜಗಳಗಳು ಆಗುತ್ತಿವೆ. ವಿದ್ಯುತ್ ಆಗಾಗ ಕೈ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಒಟ್ಟಾರೆ ನೀರಿನ ಸಮಸ್ಯೆ ಜನರ ನಿದ್ದೆಗೆಡಿಸಿದೆ. ಜಿಲ್ಲಾ ಆಡಳಿತ ಕೂಡಲೇ ಗ್ರಾಮದಲ್ಲಿ ಇನ್ನೂ ನಾಲ್ಕು ಕೊಳವೆಬಾವಿಗಳನ್ನು ಕೊರೆಯಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಹಾಳಾದ ಪೈಪ್‍ಲೈನ್ ಬದಲಿಸಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಂಜರು ಭೂಮಿಯಾದ ನದಿ:‘ಸಂಪೂರ್ಣ ಬತ್ತಿರುವ ಗ್ರಾಮದ ಮೂಲಕ ಹಾದು ಹೋಗುವ ಮಾಂಜ್ರಾ ನದಿ ಈಗ ಬಂಜರು ಭೂಮಿಯಂತಾಗಿದೆ. ನದಿ ಮಧ್ಯದಲ್ಲಿ ಅಲ್ಲಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ನೀರು ಇಲ್ಲದ ಕಾರಣ ಜಾನುವಾರುಗಳು ನದಿಯತ್ತ ಬರುತ್ತಿಲ್ಲ. ಮೀನುಗಾರಿಕೆಯೂ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಯಾವುದೇ ಚಟುವಟಿಕೆಗಲ್ಲದೇ ನದಿ ಪಾತ್ರ ಭಣಗುಡುತ್ತಿದೆ’ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT