ಬೀದರ್‌: 5ರಿಂದ ಜನಸ್ಪಂದನ ಸಭೆ

7
ಸಾರ್ವಜನಿಕರ ಕುಂದು ಕೊರತೆ ಆಲಿಕೆ: ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ

ಬೀದರ್‌: 5ರಿಂದ ಜನಸ್ಪಂದನ ಸಭೆ

Published:
Updated:
Prajavani

ಬೀದರ್‌: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಜಿಲ್ಲೆಯಲ್ಲಿ ಜನವರಿ 5 ರಿಂದ ಜೂನ್‌ 6 ರ ವರೆಗೆ ಹೋಬಳಿ ಮಟ್ಟದ ಜನಸ್ಪಂದನ ಸಭೆಗಳ ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಆದೇಶ ಹೊರಡಿಸಿದ್ದಾರೆ.

ಎಲ್ಲ ತಾಲ್ಲೂಕುಗಳ ಹೋಬಳಿ ಮಟ್ಟದಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ಸೋಮವಾರ ಅಧಿಕಾರಿಗಳು ಉಪಸ್ಥಿತರಿದ್ದು ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಬೇಕು ಎಂದು ತಿಳಿಸಿದ್ದಾರೆ.

ಜನಸ್ಪಂದನ ಸಭೆ ನಡೆಸಲು ಹೋಬಳಿವಾರು ಒಬ್ಬರು ತಾಲ್ಲೂಕು ಮಟ್ಟದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಹೋಬಳಿ ಮಟ್ಟದ ಸಭೆ ಆಯಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಸಭೆ ನಡೆಯುವ ಮುನ್ನಾದಿನ ಸಾರ್ವಜನಿಕರು ಅರ್ಜಿಗಳನ್ನು ಪಡೆದು ಸಭೆಯ ದಿನ ಅಗತ್ಯ ಮಾಹಿತಿ ಒದಗಿಸಬೇಕು. ಸ್ವೀಕೃತಗೊಂಡ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ತಹಶೀಲ್ದಾರರು ವೆಬ್‌ಸೈಟ್‌ನಲ್ಲಿ ಬಂದ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ತಪ್ಪದೇ ಸಭೆಯ ಮರು ದಿನ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಜನಸ್ಪಂದನ ಸಭೆಗೆ ತಪ್ಪದೆ ಹಾಜರಾಗಬೇಕು. ಒಂದು ವೇಳೆ ಗೈರು ಹಾಜರಾಗಿದ್ದಲ್ಲಿ ಅಂತಹ ಅಧಿಕಾರಿಗಳ ಮಾಹಿತಿಯನ್ನು ಸಂಬಂಧಿಸಿದ ತಹಶೀಲ್ದಾರರು ತಪ್ಪದೇ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಪ್ರತಿ ಸೋಮವಾರ (ಸಾರ್ವಜನಿಕ ರಜೆ ಹೊರತುಪಡಿಸಿ) ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ತಮ್ಮ ಕೇಂದ್ರ ಸ್ಥಾನದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಜನರ ಮನವಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ನಿಯೋಜಿತ ನೋಡಲ್ ಅಧಿಕಾರಿಗಳು ಪ್ರತಿ ಜನಸ್ಪಂದನ ಸಭೆಗೆ ಮುಂಚಿತವಾಗಿ ತಮಗೆ ವಹಿಸಿಕೊಟ್ಟ ಹೋಬಳಿಯಲ್ಲಿ ಹಾಜರಿರಬೇಕು. ಸಭೆಯ ದಿನ ಬಂದ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮಗೆ ಸಾಧ್ಯವಾದ ಕಡೆ ಜನಸ್ಪಂದನ ಸಭೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !