ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಭ್ಯರ್ಥಿ ಪರ ಅಲೆ: ರಮೇಶ ಪಾಟೀಲ

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ
Last Updated 19 ಅಕ್ಟೋಬರ್ 2020, 13:41 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಈಶಾನ್ಯ ಶಿಕ್ಷಕರ ಮತ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರ ಪರ ಅಲೆ ಕಂಡು ಬರುತ್ತಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳಿದರು.

ಇಲ್ಲಿಯ ಚೌಧರಿ ಫಂಕ್ಷನ್ ಹಾಲ್‍ನಲ್ಲಿ ನಡೆದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರ್ಯಗಳನ್ನು ಶಿಕ್ಷಕರು ಈಗಲೂ ಸ್ಮರಿಸುತ್ತಾರೆ. ಪುರ್ಲೆ ಅವರೂ ಶಿಕ್ಷಕರಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡಲು 17 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಹೀಗಾಗಿ ಹೋದಲ್ಲೆಲ್ಲ ಶಿಕ್ಷಕರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಬೆಂಬಲ ಸೂಚಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಪುರ್ಲೆ ಅವರು ಶಿಕ್ಷಕ ವೃತ್ತಿಯಿಂದ ಬಂದವರಾಗಿದ್ದಾರೆ. 17 ವರ್ಷಗಳ ಕಾಲ ರಾಜ್ಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅನೇಕ ಹೋರಾಟಗಳನ್ನು ಸಂಘಟಿಸಿ ಅರ್ಹ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನ ಬಡ್ತಿ ಕೊಡಿಸಿದ್ದಾರೆ’ ಎಂದು ಹೇಳಿದರು.

‘ಬೆಲೆ ಏರಿಕೆಯ ದಿನಮಾನಗಳಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಜ್ಞಾನ ಅವರಿಗೆ ಇದೆ. ವಿಧಾನ ಪರಿಷತ್ತಿಗೆ ಆಯ್ಕೆಯಾದರೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ಮೀರಿ ಶ್ರಮಿಸಲಿದ್ದಾರೆ. ಹೀಗಾಗಿ ಜಿಲ್ಲೆಯ ಶಿಕ್ಷಕರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಕಾರ್ಯದರ್ಶಿ ವಿಜಯಕುಮಾರ ಖೂಬಾ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರ್ ಪಾಶಾ, ಕಾರ್ಯಾಧ್ಯಕ್ಷ ರಾಜಕುಮಾರ ಸುಗುರೆ, ವಕ್ತಾರ ಆಕಾಶ ಖಂಡಾಳೆ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಅಗಡಿ, ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರ ಇದ್ದರು.

ಬಳಿಕ ರಮೇಶ ಪಾಟೀಲ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಜೀಜಾಮಾತಾ ಶಾಲೆ ಸೇರಿದಂತೆ ನಗರದ ವಿವಿಧ ಶಾಲಾ– ಕಾಲೇಜುಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT