ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್-ಬಿಜೆಪಿ ಮಧ್ಯೆ ಸ್ಪರ್ಧೆ: ಕುಮಾರಸ್ವಾಮಿ

ಉಪ ಚುನಾವಣೆ: ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಪರ ಪ್ರಚಾರ
Last Updated 15 ಏಪ್ರಿಲ್ 2021, 6:53 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಉಪ ಚುನಾವಣೆ ಪ್ರಚಾರ ಅಂತಿಮ ಹಂತ ತಲುಪಿದ್ದು, ಜೆಡಿಎಸ್ ಮತ್ತು ಬಿಜೆಪಿ
ಮಧ್ಯೆ ಪ್ರಬಲ ಸ್ಪರ್ಧೆ ಇರುವುದು ಎಲ್ಲೆಡೆ ಗೋಚರಿಸುತ್ತಿದೆ. ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣನವರ ಪುಣ್ಯಭೂಮಿ ಯಲ್ಲಿನ ಈ ಚುನಾವಣೆಯಿಂದ
ರಾಜ್ಯಕ್ಕೆ ಮಹತ್ವದ ಸಂದೇಶ ಹೋಗಲಿದೆ. 2023ರ ಚುನಾವಣೆಗೆ ಇದು ದಿಕ್ಸೂಚಿ ಆಗಲಿದೆ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಮುಸ್ಲಿಂ ಸಮುದಾಯದ ಬಗ್ಗೆ ಬರೀ ಅನುಕಂಪ ತೋರಿಸದೆ ಪ್ರಾತಿನಿಧ್ಯ ನೀಡಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಪಕ್ಷಕ್ಕೆ ಮುಸ್ಲಿಂ, ಕುರುಬ, ಮರಾಠಾ, ಲಿಂಗಾಯತ, ಕಬ್ಬಲಿಗ ಈ ಎಲ್ಲ ಸಮುದಾಯದವರೂ ಬೆಂಬಲಿಸುತ್ತಿದ್ದಾರೆ’ ಎಂದರು.

‘ಮಸ್ಕಿ ಹಾಗೂ ಇತರೆಡೆ ಪಕ್ಷಕ್ಕೆ ಭದ್ರ ಬುನಾದಿ ಇಲ್ಲ. ಆದರೆ, ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಆಗಿದೆ. ಆದರೆ, ವಿರೋಧ ಪಕ್ಷದವರು ಇದಕ್ಕೆ ಬೇರೆ ಬಣ್ಣ ಬಳಿಯುತ್ತಿದ್ದಾರೆ. ಹಣ ಪಡೆದು ಇಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದ್ದಿದ್ದರೆ
ನಾನೇಕೆ ವಾರದಿಂದ ಇಲ್ಲಿದ್ದು ಪ್ರಚಾರ ನಡೆಸುತ್ತಿದ್ದೆ. ಓಣಿ ಓಣಿ, ಮನೆ ಮನೆಗೆ ಏಕೆ ಭೇಟಿ ನೀಡುತ್ತಿದ್ದೆ’ ಎಂದು ಪ್ರಶ್ನಿಸಿದರು.

‘ಜಮೀರ್ ಹೇಳಿಕೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಆಪರೇಷನ್ ಕಮಲದ ಸಂದರ್ಭದಲ್ಲಿ ಬಿ.ನಾರಾಯಣರಾವ್ ₹ 40 ಕೋಟಿ ಕೊಡುತ್ತೇನೆ ಎಂದರೂ ಬಿಜೆಪಿಗೆ ಸೇರ್ಪಡೆ ಆಗಿಲ್ಲ ಎಂದು ಜಮೀರ್ ಹೇಳಿಕೆ ಕೊಟ್ಟಿದ್ದಾರೆ. ಇದರಲ್ಲಿ ಜಮೀರ್‌ ಅವರ ಕೈವಾಡವೂ ಇದೆ’ ಎಂದರು.

ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ, ನಗರ ಘಟಕದ ಅಧ್ಯಕ್ಷ ಸುಶೀಲ್ ಆವಸ್ಥಿ, ಪ್ರವಕ್ತಾ ಆಕಾಶ ಖಂಡಾಳೆ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ ಇದ್ದರು.

‘ಜನಪರ ಆಡಳಿತ ನೀಡದ ಬಿಜೆಪಿ’

ಬಸವಕಲ್ಯಾಣ: ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದರೂ ಜನಪರ ಯೋಜನೆಗಳನ್ನು ಕೈಗೊಂಡಿಲ್ಲ. ಜನಪರ ಆಡಳಿತ ನೀಡುತ್ತಿಲ್ಲ’ ಎಂದು ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಮುಡಬಿವಾಡಿಯಲ್ಲಿ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರೈತರ, ಬಡವರ ಎಂದು ಹೇಳುವ ಕೇಂದ್ರ ಸರ್ಕಾರ ಧರಣಿನಿರತ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಪೆಟ್ರೋಲ್ ಬೆಲೆ, ಆಹಾರಧಾನ್ಯದ ಬೆಲೆ ಏರಿದೆ. ಜನಪರ ಯೋಜನೆ ಜಾರಿಗೊಳಿಸುತ್ತಿಲ್ಲ. ಇಂಥ ಸರ್ಕಾರವನ್ನು ಏಕೆ ಬೆಂಬಲಿಸಬೇಕು' ಎಂದು ಪ್ರಶ್ನಿಸಿದರು.

‘ಸರ್ಕಾರ ಚುನಾವಣಾ ಪ್ರಚಾರದಲ್ಲಿ ಮಗ್ನವಾಗಿದೆ. ಕೋವಿಡ್ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದು, 17 ಉಪ ಚುನಾವಣೆಗಳು ನಡೆದಿವೆ’ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಮಾಡಲಾಯಿತು. ಆದ್ದರಿಂದ ರೈತರು ಜೆಡಿಎಸ್‌ಗೆ ಮತ ನೀಡಿ ಗೆಲ್ಲಿಸಬೇಕು' ಎಂದು ಕೋರಿದರು. ಪ್ರಮುಖರಾದ ತಿಮ್ಮಯ್ಯ ಪುರ್ಲೆ, ವೆಂಕಟರಾವ್ ನಾಡಗೌಡ, ಭೋಜೇಗೌಡ ರಮೇಶಗೌಡ, ನಾಸೀರ ಹುಸೇನ್ ಕೃಷ್ಣೆಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT