ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಡೀಲ್ ಪಕ್ಷ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬಸವಕಲ್ಯಾಣ ಉಪ ಚುನಾವಣೆ ಬಿಜೆಪಿ ಪ್ರಚಾರ ಸಭೆ
Last Updated 31 ಮಾರ್ಚ್ 2021, 3:42 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಹಣ ಪಡೆದು ಬಿಜೆಪಿ ಟಿಕೆಟ್ ನೀಡಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಜೆಡಿಎಸ್ ಡೀಲ್ ಪಕ್ಷವಾಗಿದ್ದು, ನಮ್ಮದು ಸಾಮಾನ್ಯ ಕಾರ್ಯಕರ್ತರ ಪರವಾದ ಪಕ್ಷ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ನಗರದ ಶಾಂತಿನಿಕೇತನ ಶಾಲೆ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಉಪ ಚುನಾವಣೆ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಅಭ್ಯರ್ಥಿ ಶರಣು ಸಲಗರ ಸಾಮಾನ್ಯ ಕಾರ್ಯಕರ್ತನಾಗಿದ್ದು, ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆ ಪರಿಗಣಿಸಿ ಟಿಕೆಟ್ ನೀಡಲಾಗಿದೆ. ಕೆಲವರು ಒಳಗಿನವ, ಹೊರಗಿನವ ಎಂದು ವಾದಿಸುತ್ತಿದ್ದು, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ದೇಶದ ಮೂಲೆಮೂಲೆಯ ಶರಣರು ಇಲ್ಲಿಗೆ ಬಂದಿದ್ದರು. ಹೀಗಿದ್ದಾಗ ಪಕ್ಕದ ಜಿಲ್ಲೆಯವರಾದ ಶರಣು ಸಲಗರ ನಡೆಯುವುದಿಲ್ಲವೇ? ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಅಕ್ಕಿ ವಿತರಣೆಗೆ, ಅತಿವೃಷ್ಟಿ, ಅನಾವೃಷ್ಟಿ ಆದಾಗ ಜನರ ಕಷ್ಟಗಳಿಗೆ ಸ್ಪಂದಿಸಲು ಶರಣು ಬೇಕು. ಟಿಕೆಟ್ ಪಡೆಯಲು ಬೇಡವೇ? ನಾನು 15 ದಿನ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸಲಿದ್ದೇನೆ’ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಸಮೀಕ್ಷೆಯಲ್ಲಿ ಶರಣು ಸಲಗರ ಬಗ್ಗೆ ಒಲವು ವ್ಯಕ್ತವಾದ್ದರಿಂದ ಟಿಕೆಟ್ ನೀಡಲಾಗಿದೆ. ಆದರೆ, ಕೆಲವರು ಸ್ವಾಭಿಮಾನದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೆ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ನಾನೇ ಕೇಳಿಕೊಂಡಿದ್ದೆ. ಆದರೂ ಅವರು ಆ ಕೆಲಸ ಮಾಡಲಿಲ್ಲ. ಅತಿವೃಷ್ಟಿ ಆದಾಗ ನಾನು ನಡೆದುಕೊಂಡು ಹಳ್ಳಿ ಹಳ್ಳಿಗೆ ಹೋದೆ. ಆದರೆ, ಅವರು ಹೆಲಿಕಾಪ್ಟರ್ ಮೂಲಕ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದರು. ಇನ್ನೊಬ್ಬ ಮಾಜಿ ಶಾಸಕ ಎಂ.ಜಿ.ಮುಳೆ ಅವರು ಬಿಜೆಪಿಯಲ್ಲೇ ಇದ್ದುಕೊಂಡು ಮರಾಠಾ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬಹುದಿತ್ತು. ಅದನ್ನು ಬಿಟ್ಟು ಆಸ್ತಿತ್ವವೇ ಇಲ್ಲದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದರಿಂದ ಏನು ಸಾಧಿಸಿದಂತಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಪ್ರಧಾನಿ ಮೋದಿ ಅವರು ಬಸವಣ್ಣನವರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ಈ ಕಾರಣ ಬಿಜೆಪಿಯನ್ನು ಗೆಲ್ಲಿಸಬೇಕು. ಬಸವಣ್ಣನವರ ಮೇಲೆ ಅವರು ಇಟ್ಟಿ ರುವ ಅಭಿಮಾನಕ್ಕೆ ನಾವು ನಿಮ್ಮ ಪಕ್ಷದ ಕೈ ಹಿಡಿದಿದ್ದೇವೆ ಎಂಬುದನ್ನು ತೋರಿಸಿಕೊಡಬೇಕಾಗಿದೆ. ಶರಣು ಹೊರಗಿನವರು ಎನ್ನುವ ವಾದದಲ್ಲಿಹುರುಳಿಲ್ಲ. ರಾಹುಲ್ ಗಾಂಧಿ ವೈಯನಾಡಿಯಲ್ಲಿ, ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಲಿಲ್ಲವೇ. ಬಸವಣ್ಣನವರೇ ಸ್ವತಃ ವಿಜಯಪುರ ದಿಂದ ಇಲ್ಲಿಗೆ ಬಂದು ಕಾರ್ಯಗೈದರಲ್ಲ. ಶರಣು ಕೂಡ ಇದನ್ನು ಕಾರ್ಯಕ್ಷೇತ್ರ ವನ್ನಾಗಿ ಮಾಡಿಕೊಂಡಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿ ಮೋದಿ ಅದನ್ನು ಉದ್ಘಾಟಿಸುತ್ತಾರೆ. 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಶರಣು ಸಲಗರ ಆ ಸಮಾರಂಭದ ಅಧ್ಯಕ್ಷತೆ ವಹಿಸುವುದು ನಿಶ್ಚಿತ’ ಎಂದರು.

ವಸತಿ ಸಚಿವ ವಿ.ಸೋಮಣ್ಣ, ಮಹಾರಾಷ್ಟ್ರದ ಔಸಾ ಶಾಸಕ ಅಭಿಮನ್ಯು ಪವಾರ, ಉಸ್ತುವಾರಿ ಈಶ್ವರಸಿಂಗ್ ಠಾಕೂರ, ಅಭ್ಯರ್ಥಿ ಶರಣು ಸಲಗರ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಕೃಷ್ಣಾ ಗೋಣೆ ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ ತೇಲ್ಕೂರ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅಮರನಾಥ ಪಾಟೀಲ, ಜಿ.ಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಅಸ್ವಥನಾರಾಯಣ, ಬಾಬು ವಾಲಿ ಪಾಲ್ಗೊಂಡಿದ್ದರು.

‘ಖೂಬಾ ನಾಮಪತ್ರ ವಾಪಸ್ಸು ನಿಶ್ಚಿತ’

‘ಮಲ್ಲಿಕಾರ್ಜುನ ಖೂಬಾ ಬಗ್ಗೆ ಸಂಸದರು ಅಷ್ಟೊಂದು ತಲೆ ಕೆಡಿಸಿಕೊಳ್ಳುವುದು ಬೇಡ. ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರೂ ವಾಪಸ್ಸು ಪಡೆಯುತ್ತಾರೆ. ಇಲ್ಲದಿದ್ದರೆ ಬಿಜೆಪಿಯನ್ನು ಬೆಂಬಲಿಸುವುದು ನಿಶ್ಚಿತ. ಹಾಗಾಗುವಂತೆ ನಾನು ನೋಡಿಕೊಳ್ಳುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

‘ಮಟ್ಕಾ, ಗೂಂಡಾಗಿರಿ ಖತಂ ಮಾಡುವೆ’

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮಾತನಾಡಿ, ‘ಸಮಾರಂಭದಲ್ಲಿ ಪಾಲ್ಗೊಂಡಿರುವ ನನ್ನ ತಾಯಿಯ ಆಣೆ ಮಾಡಿ ಹೇಳುತ್ತೇನೆ. ನಾನು ಶಾಸಕನಾದ ನಾಲ್ಕೇ ದಿನಗಳಲ್ಲಿ ಗೂಂಡಾಗರ್ದಿ, ಮಟ್ಕಾ ದಂಧೆ ಇಲ್ಲದಂತೆ ಮಾಡುತ್ತೇನೆ.ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸಾಗಿದೆ’ ಎಂದು ಹೇಳಿದರು.

ಶರಣು ಸಲಗರ ನಾಮಪತ್ರ ಸಲ್ಲಿಕೆ

ಶಾಂತಿನಿಕೇತನ ಶಾಲೆ ಮೈದಾನದಲ್ಲಿ ಪ್ರಚಾರ ಸಭೆ ನಡೆಸಿದ ನಂತರ ಅಲ್ಲಿಂದ ತ್ರಿಪುರಾಂತವರೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಯಿತು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಶರಣು ಸಲಗರ ಅವರೊಂದಿಗೆ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT