ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜೀವಜಲಕ್ಕಾಗಿ ಮುಗಿಬೀಳುವ ಜನ

ಶೆಂಬೆಳ್ಳಿ: ಕೆರೆ ಕಾಮಗಾರಿ ಮುಗಿಸಲು ಗ್ರಾಮಸ್ಥರ ಒತ್ತಾಯ
Last Updated 5 ಮೇ 2020, 11:56 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಜನ ಕೋವಿಡ್‌–19 ಭೀತಿಯ ಮಧ್ಯೆಯೂ ಮುಗಿ ಬೀಳುತ್ತಿದ್ದಾರೆ.

ಇಲ್ಲಿ ಸುಮಾರು 2,000 ಜನ ವಾಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯೂ ಇದೆ.

ವಿಶೇಷವಾಗಿ ಪರಿಶಿಷ್ಟ ಪಂಗಡ ಕಾಲೊನಿಯ ಜನರು ಕೊಡ ನೀರಿಗಾಗಿ ಹರಸಹಾಸ ಪಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ‘ನಮಗೆ ಕುಡಿಯಲು ನೀರು ಕೊಡಿ’ ಎಂದು ಅಧಿಕಾರಿಗಳಲ್ಲಿ ಪರಿ ಪರಿಯಾರಿ ಬೇಡಿಕೊಂಡಿದ್ದಾರೆ.

‘ಕೆರೆ ಕೆಳಗಿನ ಬಾವಿಯಿಂದ ಇಡೀ ಊರಿಗೆ ನೀರು ಪೂರೈಸಲಾಗುತ್ತದೆ. ಆದರೆ ಅಲ್ಲಿಯೂ ನೀರು ಕಮ್ಮಿಯಾಗಿದೆ. ಮೂರು ನಾಲ್ಕು ದಿನಕ್ಕೊಮ್ಮೆ ನೀರು ಬಂದರೆ ಜನ ಸಹಜವಾಗಿಯೇ ಮುಗಿ ಬೀಳುತ್ತಾರೆ. ಕೆಲವೊಮ್ಮೆ ವಿದ್ಯುತ್ ಕೈಕೊಟ್ಟು ವಾರಗಟ್ಟಲೇ ನೀರು ಸಿಗದಿದ್ದಾಗ ಜನ ಏನು ಮಾಡಬೇಕು’ ಎಂದು ಗ್ರಾಮದ ಯುವಕ ಅಶೋಕ ಶೆಂಬೆಳ್ಳಿ ಆಕ್ರೋಶ ಹೊರ ಹಾಕಿದ್ದಾರೆ.

‘ಎಲ್ಲೆಡೆ ಕೋವಿಡ್-19 ಸೋಂಕಿನ ಆತಂಕ ಇದೆ. ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹೇಳುತ್ತಿದೆ. ಆದರೆ ನಮ್ಮ ಊರಿನ ಜನ ನೀರಿಗಾಗಿ ಮುಗಿ ಬೀಳುತ್ತಿರುವುದು ಯಾರಿಗೂ ಕಾಣುತ್ತಿಲ್ಲವೇ’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

‘2016ರಲ್ಲಿ ಒಡೆದ ಶೆಂಬೆಳ್ಳಿ ಕೆರೆ ದುರಸ್ತಿ ಕೆಲಸ ಮುಗಿದಿಲ್ಲ. ಈ ಕಾರಣ ಜನ ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಬೇಸಿಗೆ ಮುಗಿಯುವ ವೇಳೆಗೆ ಬಾಕಿ ಉಳಿದ ಕೆರೆ ಕಾಮಗಾರಿ ಪೂರ್ಣ ಮಾಡುವಲ್ಲಿ ಸಂಬಂಧಿತರು ಕಾಳಜಿ ವಹಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಶೆಂಬೆಳ್ಳಿಯಲ್ಲಿ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಕೆಲ ಕಡೆ ಸಮಸ್ಯೆಯಾಗಿವೆ. ಕೆಲ ಖಾಸಗಿ ಬಾವಿ ಮಾಲೀಕರು ನೀರು ಕೊಡಲು ಮುಂದೆ ಬಂದಿದ್ದಾರೆ. ಅವರಿಂದ ಪಡೆದು ಸಮಸ್ಯೆ ಪರಿಹರಿಸಲಾಗುವುದು’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಗೀತಾ ದೇಶಮುಖ ತಿಳಿಸಿದ್ದಾರೆ.

‘ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ಗುರುತಿಸಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಶನಿವಾರ ಪಿಡಿಒ ಮತ್ತು ಎಂಜಿನಿಯರ್ ಜತೆ ಸುತ್ತಾಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಖಾಸಗಿಯವರು ನೀರು ಕೊಡಲು ಮುಂದೆ ಬಾರದಿದ್ದಾಗ ಟ್ಯಾಂಕರ್ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಕುರಿತು ತಾಲ್ಲೂಕು ಪಂಚಾಯಿತಿ ಇಒ ಅವರ ಗಮನಕ್ಕೆ ತರಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ ಕುಂಬಾರ ಹೇಳಿದ್ದಾರೆ.

‘ಶೆಂಬೆಳ್ಳಿ, ಜೀರ್ಗಾ, ಸಂತಪುರ ಗ್ರಾಮಗಳಲ್ಲಿಯ ಕುಡಿಯುವ ನೀರಿನ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ಜೀರ್ಗಾ ಗ್ರಾಮಕ್ಕೆ ₹1 ಲಕ್ಷ ಅನುದಾನ ಬಂದಿದೆ. ಆದಷ್ಟು ಬೇಗ ಈ ಊರುಗಳ ಜನರನ್ನು ನೀರಿನ ಸಮಸ್ಯೆಯಿಂದ ಮುಕ್ತ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ ತಿಳಿಸಿದ್ದಾರೆ.

‘ಕೋವಿಡ್-19 ಸೋಂಕು ತಡೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ನೀರು ಹಿಡಿಯುವ ವೇಳೆ ಜನ ಮುಗಿ ಬೀಳದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆ ತಕ್ಷಣ ಪರಿಹರಿಸಲು ಜಿ.ಪಂ ಸಿಇಒ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT