ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಸೇರ್ಪಡೆ ಅಭಿಮಾನದ ಸಂಗತಿ: ಸಮೀರ್ ಸೋಂಧಿ ಹೇಳಿಕೆ

ಸೇನಾ ಭರ್ತಿ ಪೂರ್ವ ಸಿದ್ಧತಾ ಶಿಬಿರ ಸಮಾರೋಪ
Last Updated 13 ನವೆಂಬರ್ 2021, 15:29 IST
ಅಕ್ಷರ ಗಾತ್ರ

ಬೀದರ್: ‘ಭಾರತೀಯ ಸೇನೆ ಸೇರ್ಪಡೆ ಅಭಿಮಾನದ ಸಂಗತಿ. ಯುವಕರು ಸ್ವಯಂ ಪ್ರೇರಣೆಯಿಂದ ಸೇನೆಗೆ ಸೇರಲು ಮುಂದೆ ಬರಬೇಕು’ ಎಂದು ಬೀದರ್ ವಾಯುಪಡೆ ಕೇಂದ್ರದ ಏರ್ ಕಮಾಂಡರ್ ಸಮೀರ್ ಸೋಂಧಿ ಹೇಳಿದರು.

ಇಲ್ಲಿಯ ಬೆನಕನಳ್ಳಿ ಮಾರ್ಗದಲ್ಲಿರುವ ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ಶನಿವಾರ ನಡೆದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಪ್ರಾಯೋಜಿತ 90 ದಿನಗಳ ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೈನಿಕರಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ. ಅವರ ಜೀವನ ಶಿಸ್ತು ಬದ್ಧ ಕೂಡ ಆಗಿರುತ್ತದೆ ಎಂದು ತಿಳಿಸಿದರು.

ಸೈನಿಕರು ದಿನದ 24 ಗಂಟೆ ಗಡಿ ಕಾಯುತ್ತಿರುವುದರಿಂದಲೇ ದೇಶ ಸುರಕ್ಷಿತವಾಗಿದೆ. ಭೂಕಂಪ, ಪ್ರವಾಹ ಸೇರಿದಂತೆ ದೇಶಕ್ಕೆ ವಿಪತ್ತು ಎದುರಾದಾಗ ಮೊದಲಿಗೆ ನೆನಪಾಗುವವರೇ ಸೈನಿಕರು. ದೇಶದ ಜನ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಕೂಡ ಅವರೇ ಕಾರಣರು ಎಂದು ತಿಳಿಸಿದರು.

ತಾಯ್ನಾಡ ರಕ್ಷಣೆಗಾಗಿ ಭಾರತೀಯ ಯೋಧರು ಕಾರ್ಗಿಲ್ ಯುದ್ಧದಲ್ಲಿ ಪ್ರದರ್ಶಿಸಿದ ಶೌರ್ಯ ಪ್ರಶಂಸನೀಯ ಎಂದರು.

ಯುವ ಬ್ರಿಗೇಡ್ ಸಂಸ್ಥಾಪಕರೂ ಆದ ಖ್ಯಾತ ಚಿಂತಕ ಸೂಲಿಬೆಲೆ ಚಕ್ರವರ್ತಿ ಮಾತನಾಡಿ, ಸೇನೆಗೆ ಸೇರ ಬಯಸುವವರು ಮೊದಲು ಸೈನಿಕರ ಸಾಹಸ ಗಾಥೆಗಳನ್ನು ಓದಬೇಕು ಎಂದು ಹೇಳಿದರು.

ಸೈನಿಕರಿಗೆ ದೇಶವೇ ಸರ್ವಸ್ವ ಆಗಿರುತ್ತದೆ. ದೇಶದ ರಕ್ಷಣೆಗಾಗಿ ಅವರು ಪ್ರಾಣ ಕೊಡಲು ಸಹ ಸಿದ್ಧರಿರುತ್ತಾರೆ ಎಂದು ತಿಳಿಸಿದರು.

ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ತರಬೇತಿ ಶಿಬಿರದ ಫಲಶ್ರುತಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಮುಂಬರುವ ಸೇನಾ ಭರ್ತಿ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭ್ಯರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ತರಬೇತಿಯು ಅಭ್ಯರ್ಥಿಗಳಿಗೆ ಸೇನೆಗೆ ಸೇರಲು ನೆರವಾಗಲಿದೆ. ಶಿಸ್ತು ಬದ್ಧ ಜೀವನಕ್ಕೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಯುವ ಬ್ರಿಗೇಡ್ ರಾಜ್ಯ ಸಂಚಾಲಕ ವರ್ಧಮಾನ್, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರ್‌ಸಿಂಗ್, ತರಬೇತುದಾರರಾಗಿದ್ದ ನಿವೃತ್ತ ಸುಬೇದಾರ್‌ಗಳಾದ ಜಯಪ್ರಕಾಶ ಪವಾರ್, ಪ್ರಲ್ಹಾದ್ ಶಿವಾಜಿ, ರಾಮ ದಾವಲಜಿ, ಅಶೋಕ ಪಾಟೀಲ ಉಪಸ್ಥಿತರಿದ್ದರು. ಕಾರಂಜಾ ನಿರೂಪಿಸಿದರು. ಬಸವರಾಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT