ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದಲ್ಲಿ ಅ. 18 ರಿಂದ ಕಲ್ಯಾಣ ಪರ್ವ

ಭಕ್ತರ ವಾಸ್ತವ್ಯಕ್ಕೆ ತಾತ್ಕಾಲಿಕ ಕೊಠಡಿ: ಮಾತೆ ಗಂಗಾದೇವಿ
Last Updated 29 ಸೆಪ್ಟೆಂಬರ್ 2021, 15:29 IST
ಅಕ್ಷರ ಗಾತ್ರ

ಬೀದರ್: ಬಸವ ಧರ್ಮ ಪೀಠದ ವತಿಯಿಂದ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಕ್ಟೋಬರ್ 18 ರಿಂದ 20ರ ವರೆಗೆ 20ನೇ ಕಲ್ಯಾಣ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಗಂಗಾದೇವಿ ಹೇಳಿದರು.

ಮಾತೆ ಮಹಾದೇವಿ ಅವರು 17 ಕಲ್ಯಾಣ ಪರ್ವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು. ಈ ಬಾರಿಯ ಕಲ್ಯಾಣ ಪರ್ವವು ಅವರು ಲಿಂಗೈಕ್ಯರಾದ ನಂತರದ ಮೂರನೇ ಕಾರ್ಯಕ್ರಮವಾಗಿದೆ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಅ. 18 ರಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ, ಧರ್ಮ ಚಿಂತನ ಗೋಷ್ಠಿ ಜರುಗಲಿವೆ. ಅ. 19 ರಂದು ಸಾಮೂಹಿಕ ಇಷ್ಟಲಿಂಗ ಪೂಜೆ, ಶರಣ ವಂದನೆ, ಶರಣರಿಗೆ ಶರಣಾರ್ಥಿ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.

ಅ. 20 ರಂದು ಪರುಷ ಕಟ್ಟೆಯಿಂದ ಬಸವ ಮಹಾಮನೆ ವರೆಗೆ ಪಥ ಸಂಚಲನ ಜರುಗಲಿದೆ. ಬಳಿಕ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಅಲ್ಲಮಪ್ರಭು ಶೂನ್ಯ ಪೀಠಾರೋಹಣ ಕಾರ್ಯಕ್ರಮ, ಸಮಾರೋಪ ಸಮಾರಂಭ ಜರುಗಲಿವೆ ಎಂದು ಹೇಳಿದರು.

ಉಪನ್ಯಾಸ, ಪ್ರವಚನ, ಕೋಲಾಟ, ವಚನ ನೃತ್ಯ, ವಚನ ಗಾಯನ, ಶರಣರ ಕುರಿತ ಕಿರುನಾಟಕ ಮೊದಲಾದ ಕಾರ್ಯಕ್ರಮಗಳು ಭಕ್ತರ ಮನ ತಣಿಸಲಿವೆ ಎಂದು ತಿಳಿಸಿದರು.

ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಸಾವಿರಾರು ಬಸವ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 770 ಶರಣರು ನಡೆದಾಡಿದ ಪವಿತ್ರ ಭೂಮಿಗೆ ಬಂದು ಶರಣ ವಂದನೆ ಸಲ್ಲಿಸುವುದು ಪ್ರತಿಯೊಬ್ಬ ಲಿಂಗಾಯತರ ಆದ್ಯ ಕರ್ತವ್ಯ ಎಂದು ಭಾವಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕೂಡಲಸಂಗಮ ಹಾಗೂ ಬಸವಕಲ್ಯಾಣ ಲಿಂಗಾಯತ ಧರ್ಮೀಯರಿಗೆ ಎರಡು ಕಣ್ಣಿಗಳಿದ್ದಂತೆ. ಇವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಪ್ರಭುಲಿಂಗ ಸ್ವಾಮೀಜಿ, ಸತ್ಯಾದೇವಿ, ಸ್ವಾಗತ ಸಮಿತಿ ಅಧ್ಯಕ್ಷ ಶಂಕ್ರಪ್ಪ ಪಾಟೀಲ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಶಿವರಾಜ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT