ಶುಕ್ರವಾರ, ಮೇ 27, 2022
24 °C

‘ಪರುಷಕಟ್ಟೆಗೆ ₹ 20 ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ‘ಅನುಭವ ಮಂಟಪಕ್ಕೆ‌ ಬಿಡುಗಡೆಯಾದ ₹ 200 ಕೋಟಿಯಲ್ಲಿ, ₹ 20 ಕೋಟಿ ಪರುಷಕಟ್ಟೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದ್ದಾರೆ.

ನಗರದಲ್ಲಿ‌ ಶನಿವಾರ ನಡೆದ ಬಸವಕಲ್ಯಾಣ ‌ಅಭಿವೃದ್ದಿ ಮಂಡಳಿಯ 7 ನೇ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ಶರಣ ಸ್ಮಾರಕಗಳ ಅತಿಕ್ರಮಣ ತಡೆಯಬೇಕು. ಅನುದಾನದ ಅಗತ್ಯವಿದ್ದರೆ ಶೀಘ್ರ ಪ್ರಸ್ತಾವ ಸಲ್ಲಿಸಬೇಕು’ ಎಂದು ಅವರು ಸೂಚಿಸಿದರು.

‘ಪರುಷಕಟ್ಟೆಯ ಸಮಗ್ರ ಅಭಿವೃದ್ಧಿಯ ಜವಾಬ್ದಾರಿಯನ್ನು ಬಸವರಾಜ ಪಾಟೀಲ ಸೇಡಂ ಅವರು ಅಧ್ಯಕ್ಷ ಆಗಿರುವ ಅನುಭವ ಮಂಟಪ ಅನುಷ್ಠಾನ ಸಮಿತಿಗೆ ವಹಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಹಾಗೂ ಮಂಡಳಿಯ ಬಡ್ಡಿ ಹಣದಲ್ಲಿ ಕಾಮಗಾರಿ ಕೈಗೊಳ್ಳುವುದಕ್ಕೆ ಮತ್ತು ₹ 12.70 ಕೋಟಿ ಜಮೀನು ಖರೀದಿಗೆ ಅನುಮೋದನೆ ನೀಡಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ,‘ಅನುಭವ ಮಂಟಪಕ್ಕೆ‌ ಅಗತ್ಯವಿರುವ 31 ಎಕರೆ 6 ಗುಂಟೆ ಜಮೀನು ಖರೀದಿಸಲಾಗಿದೆ. ಕಟ್ಟಡದ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದರು.

ಸಭೆಯಲ್ಲಿ ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚಹ್ವಾಣ್, ಶಾಸಕರಾದ ಈಶ್ವರ ಖಂಡ್ರೆ, ಬಸವರಾಜ ಪಾಟೀಲ ಸೇಡಂ, ಕಲಬುರಗಿ ಸಂಸದ ಡಾ.ಉಮೇಶ ಜಾದವ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಶೇಷ ಆಹ್ವಾನಿತರಾಗಿದ್ದ ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ರಹೀಂ ಖಾನ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ, ಶಶೀಲ್ ನಮೋಶಿ, ಭೀಮರಾವ್ ಪಾಟೀಲ, ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷರು ಹಾಗೂ ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರಾದ ಅರವಿಂದ ಜತ್ತಿ, ಬಿಕೆಡಿಬಿ ಸದಸ್ಯರಾದ ಶಿವರಾಜ ನರಶೆಟ್ಟಿ, ಕಿರಣ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಕಂದಾಯ, ಆರ್ಥಿಕ, ಪ್ರಾಚ್ಯವಸ್ತು ಸಂಗ್ರಾಹಾಲಯ, ಪೌರಾಡಳಿತ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.