ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸ ಜಯಂತಿ: ಸಕಲ ಸಿದ್ಧತೆಗೆ ಸೂಚನೆ

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
Last Updated 17 ನವೆಂಬರ್ 2018, 16:06 IST
ಅಕ್ಷರ ಗಾತ್ರ

ಬೀದರ್‌: ‘ನವೆಂಬರ್ 26ರಂದು ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಕನಕದಾಸರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ 11.30ಕ್ಕೆ ಪೂಜೆ ನಡೆಯಲಿದೆ. ತದನಂತರ ಬೊಮ್ಮಗೊಂಡೇಶ್ವರ ವೃತ್ತದಿಂದ 11.30ಕ್ಕೆ ಮೆರವಣಿಗೆ ಹಾಗೂ ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆಯ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ಪೂಜೆಯ ಬಳಿಕ ಎಲ್ಲ ಅಧಿಕಾರಿಗಳು ನೇರವಾಗಿ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಬರಬೇಕು. ಸಮಾಜದ ಬಾಂಧವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕು’ ಎಂದರು.

‘ಅಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಕನಕದಾಸರ ಜೀವನಚರಿತ್ರೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು’ ಎಂದು ಸಾರ್ವಜನಿಕ ಶಿಕ್ಣಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಮೆರವಣಿಗೆಯಲ್ಲಿ ಎರಡು ಕಲಾ ತಂಡಗಳು ಹಾಗೂ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದಾಸರ ಪದಗಳನ್ನು ಹಾಡಲು ಕಲಾವಿದರಿಗೆ ಆಹ್ವಾನ ನೀಡಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

‘ಕನಕದಾಸರ ಭಾವಚಿತ್ರವನ್ನು ಅಚ್ಚುಕಟ್ಟಾದ ವಾಹನದಲ್ಲಿ ಅಲಂಕರಿಸಿ ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಕಳುಹಿಸುವ ವ್ಯವಸ್ಥೆ ಮಾಡಬೇಕು. ಎಲ್ಲ ರಸ್ತೆಗಳ ಬದಿಯಲ್ಲಿ ದೀಪಾಲಂಕಾರ ಮಾಡಬೇಕು. ವೃತ್ತಗಳನ್ನು ಶುಚಿಗೊಳಿಸಬೇಕು. ರಂಗಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸಮಾಜದ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.

ಕನಕದಾಸರ ತತ್ವ ಹಾಗೂ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯುತ್ತಿರುವ ಮಹನಿಯರನ್ನು ಸಮಾರಂಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮೆರವಣಿಗೆಯು ಶಿಸ್ತುಬದ್ಧ ನಡೆಯುವಂತೆ ನೋಡಿಕೊಳ್ಳಲು. ಮೆರವಣಿಗೆ ಆರಂಭವಾಗುವ ಸ್ಥಳದಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಪೋಲಿಸ್ ಬಂದೋಬಸ್ತ್ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕನದಾಸರ ಮೂರ್ತಿ ಪ್ರತಿಷ್ಠಾಪಿಸಿ:
‘ನಗರದ ಬರೀದ್ ಶಾಹಿ ವೃತ್ತದಲ್ಲಿ ಅಥವಾ ನಗರದ ಪ್ರಮುಖ ಸ್ಥಳವೊಂದರಲ್ಲಿ ಕನಕದಾಸರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಮುಂದಾಗಬೇಕು’ ಎಂದು ಮುಖಂಡ ಸಂತೋಷ ಜೋಳದಾಪಕೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೆರಿಕಾರ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಸಮಾಜದ ಮುಖಂಡರಾದ ಅಮೃತರಾವ್ ಚಿಮಕೋಡ, ಮಲ್ಲಿಕಾರ್ಜುನ ಬಿರಾದಾರ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ, ಲಕ್ಷ್ಮಣ ಮೇತ್ರೆ, ತುಕಾರಾಮ ಚಿಮಕೋಡೆ, ಕೆ.ಡಿ. ಗಣೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT