ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸೊಗಡಿನಿಂದಾಗಿ ಉಳಿದ ಕನ್ನಡ

ಸಾಹಿತ್ಯ ಪರಿಷತ್ತಿನ ಸಂಘ-ಸಂಸ್ಥೆಗಳ ಪ್ರತಿನಿಧಿ ಸುಬ್ರಹ್ಮಣ್ಯ ಪ್ರಭು ಅಭಿಮತ
Last Updated 29 ಡಿಸೆಂಬರ್ 2019, 10:36 IST
ಅಕ್ಷರ ಗಾತ್ರ

ಬೀದರ್‌: ‘ದೇಸಿ ಸೊಗಡಿನಿಂದಾಗಿಯೇ ಗಡಿ ಭಾಗದಲ್ಲಿ ಕನ್ನಡ ಉಳಿದಿದೆ. ಕನ್ನಡ ಇಲ್ಲಿ ನಿಜವಾದ ನೆಲದ ಭಾಷೆಯಾಗಿ ಗುರುತಿಸಿಕೊಂಡಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ-ಸಂಸ್ಥೆಗಳ ಪ್ರತಿನಿಧಿ ಸುಬ್ರಹ್ಮಣ್ಯ ಪ್ರಭು ಅಭಿಪ್ರಾಯಪಟ್ಟರು.

ನಗರದ ಕೃಷ್ಣಾ ರೆಜೆನ್ಸಿ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ‘ಗಡಿನಾಡು ಕನ್ನಡಿಗರ ಸ್ಥಿತಿ-ಗತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ದಕ್ಷಿಣ ಗಡಿಯಲ್ಲಿ ಭಾಷೆಯ ಬೆಳವಣಿಗೆಗೆ ಹೆಚ್ಚಿನ ತೊಡಕುಗಳು ಇಲ್ಲ. ಉತ್ತರ ಹಾಗೂ ಮಧ್ಯಭಾಗದಲ್ಲೇ ಅನೇಕ ಸಮಸ್ಯೆಗಳಿವೆ. ಆದರೂ ಮರಾಠಿ, ಉರ್ದು, ತೆಲುಗು, ಹಿಂದಿ, ಮೋಡಿ, ತುಳು, ಕೊಂಕಣಿ ಭಾಷೆಗಳ ಪ್ರಭಾವದ ಮಧ್ಯೆಯೂ ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಂಡಿದೆ’ ಎಂದು ತಿಳಿಸಿದರು.

‘ಗಡಿ ಭಾಗದ ಭಾಷೆ ವೈವಿಧ್ಯತೆಯಿಂದ ಕೂಡಿದೆ. ಬೀದರ್‌ ಭಾಷೆಯಲ್ಲಿ ದೇಸಿಯ ಸೊಗಡು ದಟ್ಟವಾಗಿದೆ’ ಎಂದು ಹೇಳಿದರು.

‘ಗಡಿನಾಡು ಕನ್ನಡಿಗರ ಔದ್ಯೋಗಿಕ ಸ್ಥಿತಿ ಗತಿ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ಪ್ರಕಾಶ ದೇಶಮುಖ, ‘ಇಲ್ಲಿಯ ಜನರಿಗೆ ಕೃಷಿಯೇ ಮೂಲಾಧಾರವಾಗಿದೆ. ಗೃಹಕೈಗಾರಿಕೆಗಳು ಅವನತಿಯ ಅಂಚಿನಲ್ಲಿರುವ ಕಾರಣ ಜನರ ಬದುಕು ಕಷ್ಟವಾಗಿದೆ’ ಎಂದರು.

‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದರೂ ಜನರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಗೃಹ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗಡಿಯಲ್ಲಿರುವ ಕನ್ನಡಿಗರಿಗೆ ಆರ್ಥಿಕ ಶಕ್ತಿ ತುಂಬಬೇಕಿದೆ. ಸ್ಥಳೀಯವಾಗಿ ಉದ್ಯೋಗ ದೊರೆತರೆ ಜನ ವಲಸೆ ಹೋಗುವುದು ತಪ್ಪುತ್ತದೆ’ ಎಂದು ಹೇಳಿದರು.

‘ಗಡಿನಾಡು ಕನ್ನಡಿಗರ ಸಾಹಿತ್ಯಿಕ-ಸಾಂಸ್ಕೃತಿಕ ಸ್ಥಿತಿಗತಿ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸುನೀತಾ ಕೂಡ್ಲಿಕರ್, ’ಅವಕಾಶಗಳು ದೊರೆಯದ ಕಾರಣ ಗಡಿಭಾಗ ಹಿಂದೆ ಉಳಿದಿದೆ. ಈ ಭಾಗದಲ್ಲಿ ಅನೇಕ ಸಾಹಿತಿಗಳು, ಕಲಾವಿದರು ಇದ್ದರೂ ಆಳುವ ಸರ್ಕಾರ ಅವರನ್ನು ಗುರುತಿಸುವ ಕೆಲಸ ಮಾಡಿಲ್ಲ’ ಎಂದರು.

‘ಬೀದರ್ ಜಿಲ್ಲೆ ರಾಜಧಾನಿಯಿಂದ ಬಹುದೂರ ಇದೆ. ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ಜಿಲ್ಲೆಯನ್ನು ಹತ್ತಿರದಿಂದ ನೋಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ದಂತ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಡಿ.ಎ.ಪಾಟೀಲ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಬೇಕಾದರೆ ಇಂಗ್ಲಿಷ್‌ ಅನಿವಾರ್ಯ ಎನ್ನುವ ತಪ್ಪು ಕಲ್ಪನೆಯಿಂದಾಗಿ ಕನ್ನಡ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಕನ್ನಡ ಭಾಷೆ ಅನ್ನಕೊಡುವ ಭಾಷೆಯಾಗಿ ಪರಿವರ್ತನೆಯಾಗಬೇಕು. ಅಂದಾಗ ಮಾತ್ರ ನಾಡು ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಬಂಡವಾಳ ಶಾಹಿಗಳ ಒತ್ತಡದಿಂದಾಗಿ ಸರ್ಕಾರ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮಗಳ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು ಖಂಡನೀಯ’ ಎಂದರು.

‘ಕನ್ನಡ ಮಾಧ್ಯಮ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು, ಬೆಳೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ಗಡಿಭಾಗದಲ್ಲಿ ಕನ್ನಡದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಇಲ್ಲಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯ ಯೋಜನೆ ರೂಪಿಸಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಯುವ ನಾಯಕರಾದ ರವೀಂದ್ರ ಬೋರಂಚೆ, ತೆಲಂಗಾಣ ಗೊಂದೆಗಾಂವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಹಳ್ಳೆ ಮಾತನಾಡಿದರು.
ವೇದಿಕೆಯ ಅಧ್ಯಕ್ಷ ಶಾಮರಾವ್ ನೆಲವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭುಲಿಂಗ ವಾಲ್ದೊಡ್ಡಿ, ವೈಜನಾಥ ಬಾಬಶೆಟ್ಟೆ, ಆಶಾರಾಣಿ ನೆಲವಾಡೆ ಕನ್ನಡ ಗೀತೆಗಳನ್ನು ಹಾಡಿದರು. ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು. ಸೃಜನ್ಯ ಅತಿವಾಳೆ ಕಾರ್ಯಕ್ರಮ ನಿರೂಪಿಸಿದರು. ಅಜಿತ ಎನ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT