ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೇವಲ ಭಾಷೆಯಲ್ಲ, ಬದುಕು: ಜಿಲ್ಲಾಧಿಕಾರಿ ರಾಮಚಂದ್ರನ್‌

ಕರ್ನಾಟಕ ರಾಜ್ಯೋತ್ಸವ
Last Updated 1 ನವೆಂಬರ್ 2020, 15:46 IST
ಅಕ್ಷರ ಗಾತ್ರ

ಬೀದರ್: ‘ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಬದುಕು. ಕನ್ನಡ ನಾಡು ಹಾಗೂ ನುಡಿಯ ಅಭಿವೃದ್ಧಿಗೆ ಪ್ರತಿಯೊಬ್ಬರು ಕಂಕಣ ಬದ್ಧರಾಗಿರಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ಹೇಳಿದರು.

ಇಲ್ಲಿಯ ಪೊಲೀಸ್‌ ಕವಾಯತ್ ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡ ನಾಡಿನ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣದ ಚಳವಳಿ ಮಹತ್ವದ್ದಾಗಿದೆ. ಆಲೂರು ವೆಂಕಟರಾಯರು, ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯ, ಎಸ್‌.ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಕೆಂಗಲ್‌ ಹನುಮಂತಯ್ಯ, ಪಾಟೀಲ ಪುಟ್ಟಪ್ಪ ಮೊದಲಾದ ಮಹನಿಯರ ತ್ಯಾಗವನ್ನು ಸ್ಮರಿಸಬೇಕಾಗಿದೆ’ ಎಂದು ತಿಳಿಸಿದರು.

‘ಇಡೀ ಜಗತ್ತಿಗೆ ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತವನ್ನು ಮೊಟ್ಟ ಮೊದಲು ಹೇಳಿಕೊಟ್ಟ ಕಾಯಕಯೋಗಿ ಬಸವಣ್ಣನವರ ಕರ್ಮಭೂಮಿ ಇದಾಗಿದೆ. ‘ವಚನ’ ವಾಙ್ಮಯವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಶ್ರೇಯಸ್ಸು ಬೀದರ್ ಜಿಲ್ಲೆಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಜಿಲ್ಲೆಯ ವೈದ್ಯಕೀಯ ಸಿಬ್ಬಂದಿ, ಪೊಲೀಸ್‌, ಪೌರಕಾರ್ಮಿಕರ ಪರಿಶ್ರಮ ಹಾಗೂ ಜನಪ್ರತಿನಿಧಿಗಳ ಮಾರ್ಗ ದರ್ಶನ, ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರದಿಂದ ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿವೆ. ಆದರೂ ಸಾರ್ವ ಜನಿಕರು ನಿಷ್ಕಾಳಜಿ ವಹಿಸದೆ, ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಂಡು ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡ ಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಸಶಸ್ತ್ರ ಪಡೆಯ ನೇತೃತ್ವವನ್ನು ಲಚ್ಚಪ್ಪ ಚವಾಣ್‌, ನಾಗರಿಕ ಪೊಲೀಸ್‌ ತಂಡದ ನೇತೃತ್ವವನ್ನು ಪಿಎಸ್‌ಐ ಮೆಹಬೂಬ್‌ ಅಲಿ, ಗೃಹರಕ್ಷಕ ದಳದ ನೇತೃತ್ವವನ್ನು ಶಿವರಾಜ್‌ ಭಂಡೆ, ಅಬಕಾರಿ ಇಲಾಖೆಯ ತಂಡದ ನೇತೃತ್ವವನ್ನು ಸಬ್‌ ಇನ್‌ಸ್ಪೆಕ್ಟರ್ ದಯಾನಂದ ಎಸ್‌.ಬಿ, ಅರಣ್ಯ ಇಲಾಖೆಯ ತಂಡದ ನೇತೃತ್ವವನ್ನು ಉಪ ವಲಯ ಅರಣ್ಯಧಿಕಾರಿ ಉಮಾಕಾಂತ ಎನ್.ಬಿ. ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕ ರಹೀಂಖಾನ್‌, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮುಲು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡಿ, ಬೀದರ್‌ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್ ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT