ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಂಸ್ಕೃತಿಯ ಪುಳಕ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 5 ಫೆಬ್ರುವರಿ 2019, 14:26 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಭುವನೇಶ್ವರಿ ಹಾಗೂ ಸಮ್ಮೇಳನ ಸರ್ವಾಧ್ಯಕ್ಷೆ ಅಕ್ಕ ಅನ್ನಪೂರ್ಣ ಅವರ ಮೆರವಣಿಗೆಯು ನಾಡಿನ ವಿಭಿನ್ನ ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ವಿವಿಧೆಡೆಯ ಕಲಾ ತಂಡಗಳು ಕಲೆಯ ಪ್ರದರ್ಶನದ ಮೂಲಕ ಸಾಹಿತ್ಯ ಆಸಕ್ತರು ಹಾಗೂ ಕನ್ನಡಿಗರಲ್ಲಿ ಪುಳಕ ಉಂಟು ಮಾಡಿದವು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿಯ ಮಹಿಳಾ ವೀರಗಾಸೆ, ತುಮಕೂರಿನ ಗೊಂಬೆ ಕುಣಿತ, ವೇಷಧಾರಿಗಳು, ಶಿವಮೊಗ್ಗದ ಡೊಳ್ಳು ಕುಣಿತ, ಜಿಲ್ಲೆಯ ಕಲಾವಿದರ ಕೋಲಾಟ ಸಾಂಸ್ಕೃತಿಕ ಸೊಬಗನ್ನು ಸೃಷ್ಟಿಸಿದವು.

ಎಲ್ಲರ ಕೈಯಲ್ಲಿ ರಾರಾಜಿಸಿದ ಕನ್ನಡ ಧ್ವಜಗಳು, ಮುಗಿಲು ಮುಟ್ಟಿದ ಜಯಘೋಷಗಳು, ಧ್ವನಿವರ್ಧಕಗಳಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’, ‘ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ...’, ‘ಬಾರಿಸು ಕನ್ನಡ ಡಿಂಡಿಂವ ಓ ಕರ್ನಾಟಕ ಹೃದಯ ಶಿವ’, ‘ಅಪ್ಪ ಕಣೋ ಕನ್ನಡ, ಅವ್ವ ಕಣೋ ಕನ್ನಡ, ಜೀವ ಕಣೋ ಕನ್ನಡ...’ ಮೊದಲಾದ ಕನ್ನಡ ಗೀತೆಗಳು ಕನ್ನಡಾಭಿಮಾನವನ್ನು ಉಕ್ಕಿಸಿದವು.

ಕುದುರೆಯ ಮೇಲೆ ಕುಳಿತ ಬಸವೇಶ್ವರ ಪಾತ್ರಧಾರಿ, ಬಸವಣ್ಣ, ವಿವೇಕಾನಂದರ ವೇಷ ಧರಿಸಿದ್ದ ಚಿಣ್ಣರು, ಎನ್‍ಎಸ್‍ಎಸ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ ಮಕ್ಕಳ ಶಿಸ್ತಿನ ನಡಿಗೆ, ಶುಭ್ರ ವಸ್ತ್ರ ಹಾಗೂ ಕೊರಳಲ್ಲಿ ಶಲ್ಯ ಧರಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಗಣ್ಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ಹೂವಿನಿಂದ ಅಲಂಕೃತ ಸಾರೋಟಿನಲ್ಲಿ ಕುಳಿತಿದ್ದ ಸಮ್ಮೇಳನ ಸರ್ವಾಧ್ಯಕ್ಷೆ ಅಕ್ಕ ಅನ್ನಪೂರ್ಣ ಜನರತ್ತ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಮೆರವಣಿಗೆ ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಗಣ್ಯರು, ಕನ್ನಡ ಅಭಿಮಾನಿಗಳು ಸರ್ವಾಧ್ಯಕ್ಷರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದರು. ಅವರ ಪಕ್ಕದಲ್ಲಿ ನಿಂತುಕೊಂಡು ಫೋಟೊ ಕೂಡ ಕ್ಲಿಕ್ಕಿಸಿಕೊಂಡರು.

ಲಕ್ಷ್ಮೀಬಾಯಿ ಕಮಠಾಣೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ರಾಮ ಚೌಕ್ ಸಮೀಪ ಪುಷ್ಪವೃಷ್ಟಿ ಮಾಡಿ ಸಮ್ಮೇಳನ ಅಧ್ಯಕ್ಷರನ್ನು ಸ್ವಾಗತಿಸಿ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳು, ಯುವಕರು, ಗಣ್ಯರು ಹಾಗೂ ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅನೇಕರು ಮೆರವಣಿಗೆ ಮುಂಭಾಗದಲ್ಲಿ ನಿಂತುಕೊಂಡು ಸೆಲ್ಫಿ ತೆಗೆಸಿಕೊಂಡರು.

ಕರ್ನಾಟಕ ಫಾರ್ಮಸಿ ಕಾಲೇಜಿನಿಂದ ಆರಂಭವಾದ ಮೆರವಣಿಗೆಯು ಮೈಲೂರು ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕೆಇಬಿ ರಸ್ತೆ, ಗುದಗೆ ಆಸ್ಪತ್ರೆ, ಕನ್ನಡಾಂಬೆ ರೋಟರಿ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರ ತಲುಪಿ ಸಮಾರೋಪಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT