ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಭವನ

ಬೀದರ್‌: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಚವಾಣ್ ಭರವಸೆ
Last Updated 1 ನವೆಂಬರ್ 2019, 13:10 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದರು.

ಜಿಲ್ಲಾಡಳಿತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ₹5 ಕೋಟಿಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗುವ ನಿರೀಕ್ಷೆ ಇದೆ. ನವೆಂಬರ್ ಒಳಗೆ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಶ್ರಮಿಸಿದ ಪ್ರಭುರಾವ್ ಕಂಬಳಿವಾಲೆ ಅವರ ಸ್ಮರಣಾರ್ಥ ನಗರದ ಅಂಬೇಡ್ಕರ್ ವೃತ್ತದ ಬಳಿಯ ಬಸ್ ತಂಗುದಾಣಕ್ಕೆ ಪ್ರಭುರಾವ್ ಕಂಬಳಿವಾಲೆ ಬಸ್ ತಂಗುದಾಣ ಎಂದು ಹೆಸರಿಡಲಾಗುವುದು’ ಎಂದು ಹೇಳಿದರು.

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ವಾರ್ಷಿಕ ₹6 ಸಾವಿರದ ಜತೆಗೆ ರಾಜ್ಯ ಸರ್ಕಾರ ₹4 ಸಾವಿರ ಕೊಡುತ್ತಿದೆ. ಯೋಜನೆಯಡಿ ಜಿಲ್ಲೆಯ ರೈತ ಫಲಾನುಭವಿಗಳ ಖಾತೆಗೆ ಮೂರು ಕಂತುಗಳಲ್ಲಿ ₹ 48.52 ಕೋಟಿ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.

‘ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 176 ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಮೀಸಲಿರುವ 61 ಪಶು ವೈದ್ಯ, 32 ಪರೀಕ್ಷಕರು ಹಾಗೂ 83 ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ಅನ್ನದ ಭಾಷೆಯಾಗಲಿ: ‘ಪ್ರಸ್ತುತ ತಂತ್ರಜ್ಞಾನ ಆಂಗ್ಲ ಭಾಷೆಯನ್ನು ಅವಲಂಬಿಸಿದೆ. ಬರುವ ದಿನಗಳಲ್ಲಿ ಕನ್ನಡವನ್ನು ಅವಲಂಬಿಸುವಂತಾಗಬೇಕು. ಕನ್ನಡ ಭಾಷೆ ಜ್ಞಾನ ಹಾಗೂ ಅನ್ನ ನೀಡುವ ಭಾಷೆಯಾಗಬೇಕು’ ಎಂದು ಚವಾಣ್ ಹೇಳಿದರು.

‘ದೇಶದ ಒಟ್ಟು ಭಾಷೆಗಳ ಪೈಕಿ ಕನ್ನಡ ಎಂಟನೇ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಲ್ಲಿರುವ ಆಂಗ್ಲ ಭಾಷೆಗೆ ಸ್ವಂತ ಲಿಪಿ ಇಲ್ಲ. ಆದರೆ, ಕನ್ನಡಕ್ಕೆ ತನ್ನದೇ ಆದ ಲಿಪಿ ಇದೆ’ ಎಂದು ತಿಳಿಸಿದರು.

‘ಶರಣರು, ದಾರ್ಶನಿಕರು, ದಾಸರು, ಕವಿಗಳು ಈ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕುವೆಂಪು, ಬೇಂದ್ರೆ ಅವರಂತಹ ಕವಿಗಳಿಂದ ನಾಡಿನ ಸಾಹಿತ್ಯ ಶ್ರೀಮಂತವಾಗಿದೆ’ ಎಂದು ಬಣ್ಣಿಸಿದರು.

ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಶಾಸಕರಾದ ರಹೀಂಖಾನ್, ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಅರವಿಂದ ಅರಳಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾಧಿಕಾರಿ ಡಾ. ಎಚ್‌.ಆರ್. ಮಹಾದೇವ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT