ಗುರುವಾರ , ನವೆಂಬರ್ 21, 2019
20 °C

‘ಕನ್ನಡ ಶಾಲೆಗಳ ಉಳಿವಿಗೆ ಮೀಸಲಾತಿ ಅಗತ್ಯ’

Published:
Updated:

ಭಾಲ್ಕಿ: ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮ ಶಾಲೆಗಳತ್ತ ಆಕರ್ಷಿಸಲು ಸೀಟು ಹಂಚಿಕೆ, ಉದ್ಯೋಗದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡುವ ಅಗತ್ಯವಿದೆ ಎಂದು ಪದವಿ ಕಾಲೇಜಿನ ಉಪನ್ಯಾಸಕ ರಘುಪ್ರಸಾದ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂ.ಚನ್ನಬಸವ ಪಟ್ಟದ್ದೇವರು ನಿಜಾಮರ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡಿದರು. ಅವರ ಕನ್ನಡಾಭಿಮಾನವನ್ನು ಸರ್ವರೂ ಬೆಳೆಸಿಕೊಂಡು ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಮಾನವೀಯತೆಯ ಸಂದೇಶ ಸಾರಿದ ಶರಣರು ಸಾಹಿತ್ಯ ಕ್ಷೇತ್ರಕ್ಕೆ ಅನುಪಮಾವಾದ ಕೊಡುಗೆ ನೀಡಿದ್ದಾರೆ. ಪ್ರತಿನಿತ್ಯ ವಚನ ಅಧ್ಯಯನ ಮಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು ಎಂದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಕನ್ನಡ ಭಾಷೆಯ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಎಲ್ಲೆಡೆ ಕನ್ನಡ ಡಿಂಡಿಮ ಬಾರಿಸಲು ಎಲ್ಲರೂ ಪಣ ತೊಡಬೇಕು. ಆ ಮೂಲಕ ಕನ್ನಡಾಭಿಮಾನವನ್ನು ಮೆರೆಯಬೇಕು ಎಂದು ತಿಳಿಸಿದರು.

ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಲೆ, ಬಸವರಾಜ ಗುರುಗಳು, ಚಂದ್ರಕಲಾ ಹೊನ್ನಾಳೆ ಮಾತನಾಡಿದರು.

ವಕೀಲ ವೈಜಿನಾಥ ಸಿರ್ಸಗಿ, ಸುನಿಲ್‍ಕುಮಾರ ಹೊನ್ನಾಳೆ, ಮುಖ್ಯಶಿಕ್ಷಕ ಬಸವರಾಜ ಪ್ರಭಾ, ಪಂಡರಿನಾಥ ಪವಾರ್, ಪ್ರವೀಣ ಖಂಡಾಳೆ, ಲಕ್ಷ್ಮಣ ಮೇತ್ರೆ ಹಾಗೂ ಬಸವಶ್ರೀ ಮಾಳಗೆ ಇದ್ದರು.

ಪ್ರಾಚಾರ್ಯ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಮಧುಕರ ಗಾಂವ್ಕರ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)