ಬುಧವಾರ, ಡಿಸೆಂಬರ್ 7, 2022
21 °C
ಗಮನ ಸೆಳೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪುನೀತ್ ರಾಜಕುಮಾರ ಭಾವಚಿತ್ರ

ಬೀದರ್‌: ಸಾವಿರ ಮೀಟರ್ ಕನ್ನಡ ಬಾವುಟದ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬುಧವಾರ ನಗರದಲ್ಲಿ ಒಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಬಿ.ವಿ.ಬಿ. ಕಾಲೇಜು ಸಮೀಪದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ಮಾರ್ಗಗಳ ಮೂಲಕ ಹಾಯ್ದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದ ಆವರಣಕ್ಕೆ ಬಂದು ಸಮಾರೋಪಗೊಂಡಿತು.

ಅಲಂಕೃತ ರಥದಲ್ಲಿ ಭುವನೇಶ್ವರಿ ದೇವಿ, ನಟ ಪುನೀತ್‌ ರಾಜಕುಮಾರ ಭಾವಚಿತ್ರ, 8 ಆಟೊಗಳ ಮೇಲೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಸಂಘ ಸಂಸ್ಥೆಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಮೆರವಣಿಗೆಗೆ ಚಾಲನೆ ನೀಡಿದರು. ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ರಾಜಾರಾಮ ಚಿಟ್ಟಾ, ಮುಖಂಡರಾದ ಅರುಣ ಹೋತಪೇಟ, ಶ್ರೀಮಂತ ಸಪಾಟೆ, ವಿರೂಪಾಕ್ಷ ಗಾದಗಿ, ಸಿ.ಆನಂದರಾವ್, ತುಕಾರಾಮ ಔದತ್‍ಪುರ, ನಾಗೇಶ ಬಿರಾದಾರ್, ಹಣ್ಮು ಪಾಜಿ, ಅಭಿಷೇಕ ಹಿರೇಮಠ ಭಾಗವಹಿಸಿದ್ದರು.

ಉದ್ಘಾಟನೆ:

ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಶಾಸಕ ರಹೀಂಖಾನ್ ಉದ್ಘಾಟಿಸಿದರು.

‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಶಾಂತಿ, ಸೌಹಾರ್ದತೆದಿಂದ ಜನ ಬದುಕುತ್ತಾರೆ. ಈ ಹಿರಿಮೆ, ಗರಿಮೆ ಸದಾ ನಾವು ಕಾಪಾಡೋಣ’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶಿವಲಿಂಗ ಹೇಡೆ, ‘ಎಷ್ಟು ಭಾಷೆ ಕಲಿತರೂ ಮಾತೃಭಾಷೆ ಮಾತ್ರ ಸದಾ ಕೈ ಹಿಡಿಯುತ್ತದೆ. ಅದು ಹೃದಯದ ಭಾಷೆ. ಭಾವನೆ ಅಭಿವ್ಯಕ್ತಿಗೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಅನಿವಾರ್ಯತೆ ಇರುವಲ್ಲಿ ಮಾತ್ರ ಆಂಗ್ಲ ಭಾಷೆಯ ಮೇಲೆ ಅವಲಂಬಿತವಾಗಿರಬೇಕು. ಅದನ್ನೇ ಹೊತ್ತು ಮೆರೆಸುವುದು ಯಾವತ್ತೂ ಸಾಧುವಲ್ಲ. ಕನ್ನಡ ಮಾತ್ರ ನಮಗೆ ಸದಾ ಕೈ ಹಿಡಿದು ಮುನ್ನಡೆಸುತ್ತದೆ’ ಎಂದರು.
‘ಮಾತೃ ಭಾಷೆಯ ಬಗ್ಗೆ ಅಭಿಮಾನವಿಲ್ಲದ ಜನ ತಮ್ಮ ಸಂಸ್ಕೃತಿ, ಸಭ್ಯತೆಯಿಂದ ವಂಚಿತರಾಗಬೇಕಾಗುತ್ತದೆ. ಮಾತೃ ಭಾಷೆಯ ಬಗೆಗೆ ಅಭಿಮಾನ ಬೆಳೆಸಿಕೊಂಡು ಅದನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಹುಲಸೂರಿನ ಶಿವಾನಂದ ಸ್ವಾಮೀಜಿ ನೇತೃತ್ವ, ಶಿವಯೋಗಿ ಮಚ್ಚೇಂದ್ರನಾಥ ಮಹಾರಾಜ, ಪ್ರಭುದೇವರು ಸಮ್ಮುಖ ವಹಿಸಿದ್ದರು.

ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಸಂತೋಷ ಪಾಟೀಲ, ಕಾಮಶೆಟ್ಟಿ ಚಿಕ್ಕಬಸೆ, ರಮೇಶ ಮಠಪತಿ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.