ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗೆ ಕನ್ನಡದ ಕೆಲಸ ಹಚ್ಚಿ: ಡಾ.ಶಿವಕುಮಾರ ಉಪ್ಪೆ

Last Updated 5 ಮಾರ್ಚ್ 2021, 2:09 IST
ಅಕ್ಷರ ಗಾತ್ರ

ಕಮಲನಗರ: ಮೊಬೈಲ್, ಲ್ಯಾಪ್‍ಟಾಪ್, ಟ್ಯಾಬ್, ವಾಟ್ಸ್‌ಆ್ಯಪ್ ಫೇಸ್‍ಬುಕ್‍ಗಳನ್ನು ಬೆರಳತುದಿಯಲ್ಲಿ ಇಟ್ಟುಕೊಂಡಿರುವ ಯುವಜನರನ್ನು ಕನ್ನಡದ ಕೆಲಸಕ್ಕೆ ಹಚ್ಚುವ ಕಾರ್ಯವಾಗಬೇಕು ಎಂದು ಬೀದರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಕುಮಾರ ಉಪ್ಪೆ ಕರೆ ನೀಡಿದರು.

ಪಟ್ಟಣದ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಗಡಿ ಸಮಾವೇಶ, 50 ಕನ್ನಡ ಸಾಧಕರಿಗೆ ‘ಕನ್ನಡ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ‘ಗ್ರಾಮ ಚರಿತ್ರೆ: ಹೊಳಸಮುದ್ರ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡಿಗರ ಒಳ್ಳೆಯತನ ದುರುಪಯೋಗವಾಗುತ್ತಿದೆ. ಕನ್ನಡಿಗರು ಶಾಂತಿಪ್ರೀಯರು, ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟವರು. ದ್ವೇಷ ಭಾವನೆ ಬಿಟ್ಟು ನೆಮ್ಮದಿಯ ಜೀವನಕ್ಕೆ ಒತ್ತು ಕೊಟ್ಟವರು. ರಾಜ ಮಹಾರಾಜರಾಳಿದ ನಾಡಿನಲ್ಲಿಂದು ಸ್ವಾರ್ಥ ರಾಜಕಾರಣ ಕ್ಕಾಗಿ ಗಡಿ ವಿಷಯದ ವಿವಾದದ ಕಿಡಿ ಹಚ್ಚುತ್ತಿರುವುದು ಅವಿವೇಕತನದ ಪರಮಾವಧಿ’ ಎಂದು ದೂರಿದರು.

‘ಮಹಾಭಾರತದ ಭೀಷ್ಮ ಪರ್ವದಲ್ಲಿ ಕರುನಾಡಿನ ಉಲ್ಲೇಖವಿದೆ. ಪಂಪನು ತನ್ನ ಆದಿಪುರಾಣದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡು ಹಬ್ಬಿತ್ತು ಎಂದು ತಿಳಿಸಿದ್ದಾನೆ. ಆ ಸಂದರ್ಭದಲ್ಲಿ ಇಂದಿನ ಮಹಾರಾಷ್ಟ್ರವೂ ಕರುನಾಡಿನಲ್ಲಿ ಒಂದಾಗಿತ್ತು ಎಂದು ಇತಿಹಾಸವೇ ಹೇಳುತ್ತಿದೆ. ಗಡಿ ಸಮಾವೇಶದಲ್ಲಿ ನಾನು-ನೀನು ಎನ್ನದೇ ಎಲ್ಲ ಭಾಷಿಕರು ಪಾಲ್ಗೊಂಡಿರುವುದು ಕನ್ನಡಿಗರ ಸೌಹಾರ್ದತೆಗೆ ಸಾಕ್ಷಿ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾಗತೀಕರಣದ ಪ್ರಭಾವವೂ ಭಾಷೆ ಮೇಲೆ ಬೀರಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು. ಭಾಷೆಯ ಬಗೆಗಿನ ದ್ವಂಧ್ವ ನಿಲುವು ಹಾಗೂ ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗದೇ ಭಾಷೆ ಬೆಳೆಸಬೇಕು’ ಎಂದರು.

ಮುಖಂಡ ಪ್ರಕಾಶ ಟೊಣ್ಣೆ ಮಾತನಾಡಿ, ‘ರಾಜ್ಯದ ಗಡಿಯಲ್ಲಿರುವ ಬೀದರ್ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬ ಕನ್ನಡಾಭಿಮಾನಿಗಳ ಮಹಾದಾಸೆಯನ್ನು ಸುರೇಶ ಚನಶೆಟ್ಟಿ ಅವರು ಸಾಕಾರಗೊಳಿಸಿದ್ದಾರೆ. ಕಮಲನಗರ ಪಟ್ಟಣದಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದರು.

ಪ್ರಾಚಾರ್ಯ ಎಸ್.ಎನ್. ಶಿವಣಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಳಸಮುದ್ರ ಗ್ರಾಮದ ಸಾಹಿತಿ ಸಂಗಮೇಶ್ವರ ಮುರ್ಕೆ ಅವರು ಬರೆದ ‘ಗ್ರಾಮ ಚರಿತ್ರೆ; ಹೊಳೆಸಮುದ್ರ’ ಕೃತಿ ಬಿಡುಗಡೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಝುಲ್ಪೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗಾನಂದ ಮಹಾಜನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ, ಹರಿಹರ ಕನ್ನಡ ಬಳಗದ ಜಿಲ್ಲಾ ಘಟಕ ಅಧ್ಯಕ್ಷ ಬಾಬುರಾವ ಸಂಗಮಕರ, ಮುಖಂಡ ಪ್ರವೀಣ ಪಾಟೀಲ, ಭೀಮ ಹಂಗರಗೆ ಉಪಸ್ಥಿತರಿದ್ದರು.

ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು. ಬಂಟಿ ರಾಂಪುರೆ ವಂದಿಸಿದರು. ಡಾ.ಎಸ್.ಎಸ್.ಮೈನಾಳೆ ನಿರೂಪಣೆ ಮಾಡಿದರು.

‘ಕನ್ನಡ ಕಾಯಕ ರತ್ನ’ ಪ್ರಶಸ್ತಿ ಪುರಸ್ಕೃತರು
ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 50 ವರ್ಷದ ಸುವರ್ಣ ಸಂಭ್ರಮ ವರ್ಷಾಚರಣೆ ಅಂಗವಾಗಿ 50 ಜನ ಕನ್ನಡ ಸಾಧಕರಿಗೆ ‘ಕನ್ನಡ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನೀಲಕಂಠರಾವ ಕಾಂಬಳೆ, ಬಸವರಾಜ ಪಾಟೀಲ, ಧನರಾಜ ಘಾಳೆ, ಧನರಾಜ ಸೊಲ್ಲಾಪುರೆ, ಪ್ರಕಾಶ ಮಾನಕರಿ, ಶಿವಕುಮಾರ, ಗುರುನಾಥ ವಡ್ಡೆ, ಜಗನ್ನಾಥ ಮುದ್ದಾ, ಬಸವರಾಜ ಮೈಸಲಗೆ, ಡಾ. ಅಶೋಕಕುಮಾರ ಮಳಗೆ, ಡಾ. ವಿಶ್ವನಾಥ ಚಿಕ್ಕಮುರ್ಗೆ, ಡಾ. ಮಮತಾ ಸಿಂಧೆ, ವೈಜಿನಾಥ ಭವರಾ, ಭೀಮರಾವ ಸಿರಗಿರೆ, ದಶರಥ ಭಾಡಸಂಗೆ, ರಾಜಕುಮಾರ ಬಿರಾದಾರ, ಗುರು ಶಿವಣಕರ, ಶಿವಶರಣಪ್ಪ ಚಿಕ್ಕಮುರ್ಗೆ, ಪ್ರಭುರಾವ ಕಳಸೆ, ಓಂಕಾಂತ ಸೂರ್ಯವಂಶಿ, ವೈಶಾಲಿ ಚಿಕ್ಕಮುರ್ಗೆ, ಶೀತಲ ಬಿರಾದಾರ, ನೀಲಮ್ಮ ವಡ್ಡೆ, ಇಂದ್ರಜಿತ್‌ ಗೌಳಿ, ಸತೀಶ ಕುಲಾಲ, ಶ್ರೀನಿವಾಸ ಮಂಠಾಳೆ, ಸಿದ್ರಾಮ ದೇಶಮುಖ, ಮಹಾದೇವ ಮಡಿವಾಳ, ವೈಜಿನಾಥ ಗುಡ್ಡಾ, ಜನಾರ್ಧನ ಸಾವರ್ಗೆಕರ್, ಪ್ರವೀಣ ಮಂಗಳೂರೆ, ಮಡಿವಾಳಪ್ಪ ಮಹಾಜನ, ಶಿವರಾಜ ಜಲಸಿಂಗೆ, ರವೀಂದ್ರ ಜೊರೋಬೆ, ಮಹೇಶ ಬೋಚರೆ, ಎಸ್.ವಿ. ಬಿರಾದಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೆಬ್ಬಾಳೆ ಗುಂಪಿನ ವಿರುದ್ಧ ಚನಶೆಟ್ಟಿ ಟೀಕೆ
‘ಭಾಲ್ಕಿ ಹಿರೇಮಠ, ಮೆಹಕರ-ತಡೋಳಾ, ಹಾರಕೂಡ ಶ್ರೀಗಳ ಬಳಿ ಆಶೀರ್ವಾದ ಪಡೆಯಲೆಂದು ಹೋದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಎಲ್ಲ ಸ್ವಾಮೀಜಿಗಳ ಬೆಂಬಲ ನನಗಿದೆ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಟೀಕಿಸಿದರು.

‘ಪತ್ರಿಕೆಗಳಲ್ಲಿ ಈ ಕುರಿತು ಸುದ್ದಿ ಪ್ರಕಟವಾಗಿರುವ ಬಗ್ಗೆ ಸ್ವಾಮೀಜಿಗಳೊಂದಿಗೆ ಖುದ್ದು ಮಾತನಾಡಿದಾಗ, ನಮ್ಮ ಬೆಂಬಲ ಇವರಿಗೆ-ಅವರಿಗೆ ಅಂತ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೆಬ್ಬಾಳೆ ಅವರ ಗುಂಪಿನ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT