ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಭಾಷಣಕ್ಕೆ ಅಡ್ಡಿ ನೋವು ತಂದಿದೆ

Last Updated 3 ಫೆಬ್ರುವರಿ 2018, 8:46 IST
ಅಕ್ಷರ ಗಾತ್ರ

ಜಗಳೂರು: ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವರು ಕೂಗಾಡಿ, ಅಸಭ್ಯವಾಗಿ ವರ್ತಿಸಿದ ಘಟನೆಯಿಂದ ತಮಗೆ ತೀವ್ರ ನೋವಾಗಿದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಜನವರಿ 23ರಿಂದ 31ರವರೆಗೆ ಹುಣ್ಣಿಮೆ ಮಹೋತ್ಸವದ ನಂತರ ಶುಕ್ರವಾರ ಭಕ್ತರು ಮತ್ತು ಸ್ವಾಗತ ಸಮಿತಿಯಿಂದ ಸ್ವಾಮೀಜಿ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಮಾತನಾಡುವಾಗ ಕೆಲವರು ಸಾಮೂಹಿಕವಾಗಿ ಕೂಗುತ್ತಾ ಗದ್ದಲ ಎಬ್ಬಿಸಿ ಭಾಷಣಕ್ಕೆ ಅಡ್ಡಿಪಡಿಸಿ ದ್ದರು. ಸಭೆಯಲ್ಲಿ ದುರ್ವರ್ತನೆ ತೋರಿದ ವ್ಯಕ್ತಿಗಳು ಜಗಳೂರು ತಾಲ್ಲೂಕಿನವರಲ್ಲ. ಬೇರೆ ಕಡೆಯಿಂದ ಬಂದವರಾಗಿದ್ದರು. ಭಕ್ತರು ನಂತರ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಧರ್ಮಸಭೆ ಆದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಲ್ಪವೂ ವಿಲಿತರಾಗದೆ ಭಾಷಣ ಮುಂದುವರಿಸಿದ್ದು ಸಂತೋಷ ವಾಯಿತು. ಹುಣ್ಣಿಮೆ ಇತಿಹಾಸದಲ್ಲೇ ಮೊದಲ ಬಾರಿ ಸಭೆಯಲ್ಲಿ ಅಶಿಸ್ತಿನ ಪ್ರದರ್ಶನವಾಗಿದ್ದು ನೋವಾಗಿದೆ’ ಎಂದು ಸ್ವಾಮೀಜಿ ನುಡಿದರು.

ಹುಣ್ಣಿಮೆಯ ಅಂತಿಮ ದಿನವಾದ ಬುಧವಾರ ಸಂಜೆ ಚಂದ್ರಗ್ರಹಣ ಇತ್ತು, ಆದರೆ ಹುಣ್ಣಿಮೆ ಕಾರ್ಯಕ್ರಮದ ವೇಳೆ ಗ್ರಹಣ ಪರಿಣಾಮ ಬೀರಿತು. ಮತ್ತೊಮ್ಮೆ ಈ ರೀತಿಯ ಘಟನೆ ಮರುಕಳಿಸದಂತೆ ಭಕ್ತರು ಎಚ್ಚರಿಕೆ ವಹಿಸಬೇಕು. ಹುಣ್ಣಿಮೆಯನ್ನು ವಿಧಾನಸಭೆ ಮಾಡದೇ ಧರ್ಮ ಸಭೆಯನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು.

ಜಗಳೂರು ತಾಲ್ಲೂಕಿನ 46 ಕೆರೆಗಳನ್ನು ನದಿ ನೀರಿನಿಂದ ತುಂಬಿಸುವ ವಿಷಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸೇರ್ಪಡೆಯಾಗುವ ಬಗ್ಗೆ ವಿಶ್ವಾಸವಿದೆ. ಯೋಜನೆ ಜಾರಿಯಾದಲ್ಲಿ ಈ ಭಾಗದಲ್ಲಿ ಹುಣ್ಣಿಮೆ ನಡೆದಿದ್ದು ಸಾರ್ಥಕವಾಗಲಿದೆ. ಬಜೆಟ್‌ಗೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹಾಗೂ ಶಾಸಕ ಎಚ್‌.ಪಿ. ರಾಜೇಶ್ ಅವರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆದಿದೆ. ಸೈನಿಕ ಹುಳುಗಳ ದಾಳಿಯಿಂದ 50 ಸಾವಿರ ಹೆಕ್ಟೇರ್‌ನಷ್ಟು ಬೆಳೆಗಳು ಹಾನಿಯಾಗಿದ್ದು, ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಸಿಗುವ ಬಗ್ಗೆ ಭರವಸೆ ಇದೆ ಎಂದರು.

₹ 1.84 ಕೋಟಿ ಸಂಗ್ರಹ: ‘ಪ್ರಸ್ತುತ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಭಕ್ತರಿಂದ ಇದುವರೆಗೆ ₹ 1.84 ಕೋಟಿ ದೇಣಿಗೆ ಸಂಗ್ರಹವಾಗಿದೆ. ಭಕ್ತರು ಕೊಟ್ಟ ಕಾಣಿಕೆ ಶ್ರಮದಿಂದ ಬಂದದ್ದು. ಆ ಹಣವನ್ನು ಸದುಪಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಜಗಳೂರಿನ ತರಳಬಾಳು ಕಟ್ಟಡಕ್ಕೆ ಈವರೆಗೆ ₹ 10 ಕೋಟಿ ಖರ್ಚು ಮಾಡಲಾಗಿದೆ. ಹುಣ್ಣಿಮೆ ಯಶಸ್ಸಿಗೆ ಸ್ವಾಗತ ಸಮಿತಿ, ಶಾಸಕರು, ಮಾಜಿ ಶಾಸಕರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಸಾಕಷ್ಟು ಜನರು ಶ್ರಮಿಸಿದ್ದಾರೆ’ ಎಂದು ಶ್ಲಾಘಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಬಿ.ಕಲ್ಲೇರುದ್ರೇಶ್‌, ಪ್ರಧಾನ ಕಾರ್ಯದರ್ಶಿ ಡಾ. ಮಂಜುನಾಥ ಗೌಡ, ಕರಿಬಸವನಗೌಡ, ಹುಸೇನ್‌ ಮಿಯಾ, ಜಿ.ಎಸ್‌.ಸುಭಾಷ್‌ ಚಂದ್ರ ಬೋಸ್‌, ಎಚ್‌.ಸಿ.ಮಹೇಶ್‌, ಟಿ. ಮಧು, ವೀರೇಂದ್ರ ಪಾಟೀಲ್‌, ಬಸವರಾಜಪ್ಪ, ಬಿ.ಪಿ.ಸುಭಾನ್‌ ಅವರೂ ಹಾಜರಿದ್ದರು.

ಸಿರಿಗೆರೆ: ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವವು ಚರಿತ್ರಾರ್ಹವಾಗಿ, ಅಭೂತಪೂರ್ವವಾಗಿ ಯಶಸ್ವಿಯಾಗಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಐಕ್ಯಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಡಿನ ಯಾವುದೇ ಭಾಗದಲ್ಲಿ ತರಳಬಾಳು ಹುಣ್ಣಿಮೆ ನಡೆದರೂ ಅಲ್ಲಿನ ಮೂಲ ಸಮಸ್ಯೆಗಳಿಗೆ ಸ್ಪಂದಿಸುವ ಮುಂದಾಲೋಚನೆ ಇಟ್ಟುಕೊಳ್ಳಲಾಗುತ್ತದೆ. ಹಳೇಬೀಡಿನಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯಲಿದೆ ಎಂದು ತಿಳಿಸಿದರು.

ಪ್ರತಿದಿನ ಆಧ್ಯಾತ್ಮಿಕ, ಆರೋಗ್ಯ, ಶಿಕ್ಷಣ, ನಾಡು ನುಡಿ, ಶರಣ ತತ್ವ, ಧರ್ಮ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ಕೊಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಜಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಕಾರ್ಯಕರ್ತರು, ಕಾರ್ಯಕ್ರಮದ ಸ್ವಾಗತ ಸಮಿತಿ ಹಾಗೂ ಭಕ್ತರು ಕಾರಣ ಎಂದರು.

ಕಾಣಿಕೆ ರೂಪದಲ್ಲಿ ಬಂದಿರುವುದನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಂಡು ಮುಂದಿನ ಸಮಸ್ಯೆಗಳ ಪರಿಹಾರಕ್ಕೆ ವಿನಿಯೋಗ ಮಾಡಲಾಗುವುದು. ‘ಶ್ರೀಮಠ ನನಗೇನು ಮಾಡಿದೆ ಎನ್ನುವುದರ ಬದಲಾಗಿ, ನಾನೇನು ಮಠಕ್ಕೆ ಕೊಡುಗೆ ನೀಡಿದ್ದೇನೆ’ ಎಂದು ಭಕ್ತರು ಸಮರ್ಪಿಸಿದ ಕಾಣಿಕೆ ಅತ್ಯಮೂಲ್ಯವಾದುದು. ಕೆರೆಯಿಂದ ಕೆರೆಗೆ ಪಾದಯಾತ್ರೆ ಸಂತೋಷಕರವಾಗಿತ್ತು. ಮುಂದಿನ ದಿನಗಳಲ್ಲಿಯೂ ಯೋಜನೆಗಳು ಸಮರ್ಪಕವಾಗಿ ನಡೆಯಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ.ಮಂಜುನಾಥಗೌಡ, ಚನ್ನಗಿರಿ ತುಮ್ಕೋಸ್‌ನ ಶಿವಕುಮಾರ್, ಪುಷ್ಪ, ಜಗಳೂರಿನ ಕಾರ್ಯಕರ್ತರು, ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್‌, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಶಾಲಾ ಕಾಲೇಜುಗಳ ಅಧ್ಯಾಪಕ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಿರಿಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT