ಕಾರಂಜಾ ಯೋಜನೆ ಸಂತ್ರಸ್ತರ ರ‍್ಯಾಲಿ

6
ಎಕರೆಗೆ ₹20 ಲಕ್ಷ ಪರಿಹಾರಕ್ಕೆ ಆಗ್ರಹ

ಕಾರಂಜಾ ಯೋಜನೆ ಸಂತ್ರಸ್ತರ ರ‍್ಯಾಲಿ

Published:
Updated:
Deccan Herald

ಬೀದರ್: ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ₹ 20 ಲಕ್ಷ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಯೋಜನೆಯ ಸಂತ್ರಸ್ತರು ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿದರು.

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಗಾಂಧಿಗಂಜ್‌ನ ರೈತ ಭವನದಿಂದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾದ 28 ಗ್ರಾಮಗಳ ಸಂತ್ರಸ್ತ ರೈತರಿಗೆ ಅವೈಜ್ಞಾನಿಕವಾಗಿ ಎಕರೆಗೆ ₹ 2,900 ರಿಂದ ₹ 6,000 ಪರಿಹಾರ ಒದಗಿಸಲಾಗಿದೆ. ನ್ಯಾಯಾಲಯದ ಮೊರೆ ಹೊದ ಕೆಲ ರೈತರಿಗೆ ಬಡ್ಡಿ ಸಮೇತವಾಗಿ ₹ 15 ಲಕ್ಷದವರೆಗೆ ಪರಿಹಾರ ಒದಗಿಸಲಾಗಿದೆ ಎಂದು ದೂರಿದರು.

ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಪೂರ್ವಾನ್ವಯ ಆಗುವಂತೆ ಬಡ್ಡಿ ಸಮೇತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡರು.

ಯೋಜನೆಯ ಸಂತ್ರಸ್ತ ರೈತರಿಗೆ ವೈಜ್ಞಾನಿಕವಾಗಿ ಎಕರೆಗೆ ₹ 20 ಲಕ್ಷ ಕಲ್ಪಿಸಬೇಕು. ಪ್ರತಿ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಮಾಸಿಕ ₹50 ಸಾವಿರ ಹಾಗೂ ಪ್ರತಿ ವ್ಯಕ್ತಿಗೆ ₹ 10 ಸಾವಿರ ಕೊಡಬೇಕು. ಕುಟುಂಬದ ಎಲ್ಲ ಸದಸ್ಯರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಅರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು. ಗೃಹ ಉಪಯೋಗಕ್ಕೆ ಉಚಿತ ವಿದ್ಯುತ್, ಅಂತ್ಯೋದಯ ಪಡಿತರ ಚೀಟಿ, ಸಂತ್ರಸ್ತರ ಮಕ್ಕಳಿಗೆ ಎಲ್ಲ ಹಂತದಲ್ಲಿ ಉಚಿತ ಶಿಕ್ಷಣ ನೀಡಬೇಕು. ಕಾರಂಜಾ ನೀರಿಗೆ ಪಡೆದ ಕರ/ಶುಲ್ಕದಲ್ಲಿ ಶೇ 50 ರಷ್ಟನ್ನು ಸಂತ್ರಸ್ತ ರೈತರಿಗೆ ಒದಗಿಸಬೇಕು. ಹೆಚ್ಚುವರಿ ಜಮೀನಿಗೆ ಎಕರೆಗೆ ₹ 25 ಲಕ್ಷ ಪರಿಹಾರ ಒದಗಿಸಬೇಕು. ಕಾರಂಜಾ ಕಾಮಗಾರಿಗೆ ಪ್ರತಿ ವರ್ಷ ಬಿಡುಗಡೆ ಮಾಡುವ ಹಣವನ್ನು ತಡೆ ಹಿಡಿದು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಶಿವಶರಣಪ್ಪ ಪಾಟೀಲ, ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೂಚಕನಳ್ಳಿ, ಕಾರ್ಯಾಧ್ಯಕ್ಷ ಜಿಲಾನಿ ಪಟೇಲ ಹಿಲಾಲಪುರ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ಮುಖಂಡರಾದ ಸುರೇಶ ಚನಶೆಟ್ಟಿ, ಶ್ರೀಮಂತ ಸಪಾಟೆ ಮೊದಲಾದವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !