ಬೀದರ್: ‘ಕಾರಂಜಾ ಜಲಾಶಯ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ, ಕಾರಂಜಾ ಸಂತ್ರಸ್ತರು ಜಮೀನು ಕಳೆದುಕೊಂಡು ಪರಿಹಾರಕ್ಕಾಗಿ ಐದು ದಶಕಗಳಿಂದ ಅಲೆದಾಡುತ್ತಿದ್ದಾರೆ. ಅವರ ಸಮಸ್ಯೆಗೆ ಸರ್ಕಾರ ತುರ್ತಾಗಿ ಸ್ಪಂದಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗಮನ ಸೆಳೆದರು.
ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ, ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ಮಾಹಿತಿ ಪಡೆದಿದ್ದೇನೆ. ಇದೀಗ ಮತ್ತೊಮ್ಮೆ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಒಂದು ದಿನಾಂಕ ನಿಗದಿಪಡಿಸಿ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರ ಜತೆ ಸೇರಿ ಸಂತ್ರಸ್ತರ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸಹ ಕಾರಂಜಾ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಬೆಲ್ದಾಳೆ ಅವರ ಮಾತಿಗೆ ದನಿಗೂಡಿಸಿದರು.
ಸ್ವಾಗತಾರ್ಹ:
‘ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ. ಅದರ ಬಗ್ಗೆ ಅಧಿವೇಶನದಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿರುವುದು ಖುಷಿ ತಂದಿದೆ. ಅದಕ್ಕೆ ಡಿ.ಕೆ. ಶಿವಕುಮಾರ ಅವರು ಸ್ಪಂದಿಸಿರುವುದನ್ನು ಸ್ವಾಗತಿಸುತ್ತೇವೆ’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.