ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕಾರಂಜಾ ಜಲಾಶಯ ಭರ್ತಿ, ಎರಡು ದಿನದಲ್ಲಿ ಒಂದೂವರೆ ಟಿಎಂಸಿ ಅಡಿ ನೀರು

Last Updated 15 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಎರಡು ದಿನ ಸತತವಾಗಿ ಸುರಿದ ಮಳೆಗೆ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ
ಕಾರಂಜಾ ಜಲಾಶಯ ತುಂಬಿದೆ. ಗುರುವಾರ ಜಲಾಶಯದ ಮೂರು ಕ್ರಸ್ಟ್‌ಗೇಟ್‌ ಗಳನ್ನು ತೆರೆದು ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 584.11 ಮೀಟರ್‌ ಇದ್ದು, 7.690 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ‌ ಹೊಂದಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ 7.530 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 11,333.64 ಕ್ಯುಸೆಕ್‌ ಇದ್ದು , ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಹರಿಯ ಬಿಡಲಾಗುತ್ತಿದೆ.

1969ರಲ್ಲಿ ಕಾರಂಜಾ ಯೋಜನೆಗೆ ಚಾಲನೆ ದೊರೆಕಿತ್ತು. 1989 ರಿಂದ ಜಲಾಶಯದಲ್ಲಿ ನೀರು ಸಂಗ್ರಹಿಸಲು ಶುರು ಮಾಡಲಾಗಿತ್ತು. ಆರಂಭದಲ್ಲಿ ಜಲಾಶಯದಲ್ಲಿ 9.27 ಟಿಎಂಸಿ ಅಡಿ ನೀರು ಸಂಗ್ರಹಿಸಲು ಯೋಜಿಸಲಾಗಿತ್ತು. ನಂತರ 7.6 ಟಿಎಂಸಿ ಅಡಿಗೆ ಇಳಿಸಲಾಯಿತು. ಪ್ರಸ್ತುತ 7.3 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುತ್ತಿದೆ. ಜಲಾಶಯದಿಂದ 29,227 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

2016ರಲ್ಲಿ ಜಿಲ್ಲೆಯಲ್ಲಿ ಬೆಂಕಿಯಂತಹ ಬಿಸಿಲು ಬಿದ್ದಿತ್ತು. ಬೇಸಿಗೆಯಲ್ಲಿ ಕೆರೆ ಕಟ್ಟೆಗಳೆಲ್ಲ ಬತ್ತಿ ಹೋಗಿದ್ದವು. ಆದರೆ, ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಮಳೆಗೆ ಜಲಾಶಯ ತುಂಬಿತ್ತು. ಜಲಾಶಯದ ಎಲ್ಲ ಗೇಟ್‌ಗಳನ್ನು ತೆರೆದು ನೀರು ಹರಿಯ ಬಿಡಲಾಗಿತ್ತು.
2010ರಲ್ಲಿ 6 ಟಿಎಂಸಿ ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿದ್ದರೂ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ ನೀರು ಹರಿಯ ಬಿಡಲಾಗಿತ್ತು. ಹೀಗಾಗಿ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ಸೆಪ್ಟೆಂಬರ್‌ 15ರಿಂದ ಸತತ ನಾಲ್ಕು ದಿನ ಮಳೆಯಾಗಿ ಜಲಾಶಯಕ್ಕೆ ಒಟ್ಟು 4 ಟಿಎಂಸಿ ಅಡಿ ನೀರು ಹರಿದು ಬಂದಿತ್ತು. ಮಂಗಳವಾರ 5 ಟಿಎಂಸಿ ಹಾಗೂ ಬುಧವಾರ 6.2 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಅತಿವೃಷ್ಟಿಯಾಗಿ ಒಟ್ಟು 1.5 ಟಿಎಂಸಿ ಅಡಿ ನೀರು ಹರಿದು ಬಂದು ಜಲಾಶಯ ಶೇಕಡ 98 ರಷ್ಟು ತುಂಬಿದೆ.

‘ಕಾರಂಜಾ ಮತ್ತು ಮಾಂಜ್ರಾ ನದಿ ತೀರದಲ್ಲಿ ಇರುವ ಗ್ರಾಮಸ್ಥರು ಎಚ್ಚರ ವಹಿಸಬೇಕು. ಜನ ನದಿ ದಂಡೆಗಳಿಗೆ ಹೋಗಬಾರದು. ಜಾನುವಾರುಗಳನ್ನು ಒಯ್ಯಬಾರದು. ಕೆಬಿಜೆಎನ್‌ಎಲ್‌ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೂ ಎಚ್ಚರಿಕೆ ವಹಿಸಬೇಕು’ ಎಂದು ಕಾರಂಜಾ ಯೋಜನೆಯ ಸಹಾಯಕ ಎಂಜಿನಿಯರ್‌ ಆನಂದ ಪಾಟೀಲ ತಿಳಿಸಿದ್ದಾರೆ.

‘ಮಳೆಯಿಂದ ಜಿಲ್ಲೆಯಲ್ಲ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಆದರ, ಕಾರಂಜಾ ಜಲಾಶಯ ಭರ್ತಿಯಾಗಿ ಬೇಸಿಗೆಯಲ್ಲಿ ಜಿಲ್ಲೆಯ ಜನ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿದೆ’ ಎಂದು ನಗರ ನಿವಾಸಿ ಸಂಜಕುಮಾರ ಡಿ.ಕೆ. ಹೇಳಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಮುಲ್ಲಾಮಾರಿ ಹಾಗೂ ಚುಳಕಿನಾಲಾ ಜಲಾಶಯಗಳು ಭರ್ತಿಯಾಗಿವೆ. ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿರುವ ಬ್ಯಾರೇಜ್‌ಗಳು ಸಹ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿಯ ಬಿಡಲಾಗಿದೆ. ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಮಾಂಜ್ರಾ ನದಿ ತುಂಬಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT