ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಬೀದರ್ ಯೋಜನೆಗಳನ್ನು ಸೇರಿಸಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಸಚಿವ, ಸಂಸದ ಮನವಿ ಸಲ್ಲಿಕೆ
Last Updated 29 ಜನವರಿ 2020, 8:48 IST
ಅಕ್ಷರ ಗಾತ್ರ

ಬೀದರ್: ಸೋಲಾರ್ ಪಾರ್ಕ್, ಕೃಷಿ ಕಾಲೇಜು ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು ಎಂದು ಜಿಲ್ಲೆಯ ಮುಖಂಡರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ ಮನವಿಪತ್ರ ಸಲ್ಲಿಸಿ ಜಿಲ್ಲೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಮನವಿ ಮಾಡಿದರು.

ಡಾ.ನಂಜುಂಡಪ್ಪ ವರದಿಯ ಪ್ರಕಾರ ಬೀದರ್ ಅತ್ಯಂತ ಹಿಂದುಳಿದ ಜಿಲ್ಲೆಯ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ, ಔರಾದ್ ತಾಲ್ಲೂಕಿನಲ್ಲಿ 2.50 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಅದಕ್ಕೆ 15 ಸಾವಿರ ಎಕರೆ ಭೂಮಿ ಅಗತ್ಯವಿದೆ. ಲೀಸ್‌ ಮೇಲೆ ರೈತರ ಭೂಮಿ ಪಡೆಯಲು ಹೆಚ್ಚಿನ ಮೊತ್ತವನ್ನು ನಿಗದಿ ಮಾಡಬೇಕು ಎಂದು ಕೋರಿದರು.

ಬೀದರ್‌–ನಾಂದೇಡ ರೈಲು ಮಾರ್ಗದ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ಭರಿಸಬೇಕು. ಬೀದರ್‌ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು. ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದು ಕೊಂಡವರಿಗೆ ಪರಿಹಾರ ಕೊಡಬೇಕು. ಬೀದರ್‌ ನಗರದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದರು.

ಜಿಲ್ಲೆಯ 14 ಕೆರೆಗಳ ಆಧುನೀಕರಣಕ್ಕಾಗಿ ₹ 1910 ಲಕ್ಷ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ. ಈ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ವಿನಂತಿಸಿದರು.

ಬಾದ್‌ನಲ್ಲಿರುವ ಕಂದಾಯ ಇಲಾಖೆಗೆ ಸೇರಿದ 38 ಎಕರೆ ಜಮೀನಿನ ಪೈಕಿ 28 ಎಕರೆ ಜಮೀನಿನಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣ ಹಾಗೂ ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ₹ 75 ಕೋಟಿ ಅನುದಾನ ಒದಗಿಸಬೇಕು ಎಂದರು.

ಅನುಭವ ಮಂಟಪದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕು. ಕೃಷಿ ಕಾಲೇಜು, ಡೈರಿ ಸೈನ್ಸ್ ಕಾಲೇಜು ಮಂಜೂರು ಮಾಡಬೇಕು. ಔರಾದ್‌ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT