ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ವಿಸ್ತರಣೆ: ಈಶ್ವರ ಖಂಡ್ರೆಗೆ ಎರಡನೇ ಬಾರಿಗೂ ಒಲಿದ ಸ್ಥಾನ

Published 27 ಮೇ 2023, 10:15 IST
Last Updated 27 ಮೇ 2023, 10:15 IST
ಅಕ್ಷರ ಗಾತ್ರ

ಬೀದರ್‌: ರಾಜಕೀಯ ಪ್ರವೇಶ ಮಾಡುವುದು ಈಶ್ವರ ಖಂಡ್ರೆ ಅವರಿಗೆ ಸುತಾರಾಮ ಇಷ್ಟ ಇರಲಿಲ್ಲ. ಬಿ.ಇ.ಮೆಕ್ಯಾನಿಕಲ್ ಪದವೀಧರಾಗಿರುವ ಇವರು ಸಹಜವಾಗಿಯೇ ರಾಜಕೀಯದಿಂದ ದೂರ ಉಳಿದು, ಉನ್ನತ ಹುದ್ದೆ ಅಲಂಕರಿಸುವ ಕನಸಿನಲ್ಲಿ ಇದ್ದರು. ಆದರೆ, ತಂದೆ ಭೀಮಣ್ಣ ಖಂಡ್ರೆ ಹಾಗೂ ಸಹೋದರ ದಿವಂಗತ ಡಾ.ವಿಜಯಕುಮಾರ ಖಂಡ್ರೆ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಪರ ಕೆಲಸ ಕೈಗೊಂಡಿದ್ದರು. ಹಾಗಾಗಿ ಅವರ ಸೆಳೆತ ಸಹಜವಾಗಿಯೇ ಈಶ್ವರ ಖಂಡ್ರೆ ಅವರನ್ನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರುವಂತೆ ಮಾಡಿತು.

1979ರಲ್ಲಿ ಮೊದಲ ಬಾರಿಗೆ ಸಕ್ರಿಯ ರಾಷ್ಟ್ರೀಯ ಸದಸ್ಯರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದ ಇವರು, ನಂತರ ಹಿಂತಿರುಗಿ ನೋಡಲಿಲ್ಲ. ರಾಜಕೀಯದಲ್ಲಿ ಯಶಸ್ಸು ಕಂಡುಕೊಂಡು ಇಂದು ರಾಜಕೀಯದಲ್ಲಿಯೇ ತಮ್ಮ ಜೀವನ ರೂಪಿಸಿ ಕೊಂಡಿದ್ದಾರೆ.

1985ರಲ್ಲಿ ಕೋಲ್ಕತ್ತದಲ್ಲಿ ನಡೆದ ಕಾಂಗ್ರೆಸ್ ಸೇವಾ ದಳದ ಶಿಬಿರದಲ್ಲಿ ಪಾಲ್ಗೊಂಡಿದ್ದರು. 1987ರಲ್ಲಿ ಭಾಲ್ಕಿ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಸೇವಾ ದಳ ಕ್ಯಾಂಪ್‌ ಆಯೋಜಿಸಿ ಅಂದಿನ ಕೇಂದ್ರ ಸಚಿವರಾಗಿದ್ದ ಜಾಫರ್ ಶರೀಫ್ ಅವರನ್ನು ಆಹ್ವಾನಿಸಿದರು.

1989ರಲ್ಲಿ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ಸೇವಾದಳದ ಸಂಘಟನಾ ಕಾರ್ಯದರ್ಶಿಯಾಗಿ ನಾಮ ನಿರ್ದೇಶನಗೊಂಡರು. ಅದೇ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡಿದ್ದರು.

1998ರಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಭಾಲ್ಕಿಗೆ ಆಹ್ವಾನಿಸಿ ಕಿಸಾನ್ ರ್‍ಯಾಲಿ ನಡೆಸಿದರು. 2005ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರಸಿಂಗರಾವ್ ಸೂರ್ಯವಂಶಿ ಪರ ಪ್ರಚಾರ ನಡೆಸಿದರು.

2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಈಶ್ವರ ಖಂಡ್ರೆ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

2013ರ ಚುನಾವಣೆಯಲ್ಲಿ 2ನೇ ಬಾರಿಗೆ ವಿಧಾನ ಸಭೆಗೆ ಪ್ರವೇಶಿಸಿದ ಖಂಡ್ರೆ ಅದೇ ವರ್ಷ ಅವರನ್ನು ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈಶ್ವರ ಖಂಡ್ರೆ ಅವರು 22 ತಿಂಗಳ ಕಾಲ ಪೌರಾಡಳಿತ ಇಲಾಖೆ ಸಚಿವ ಹಾಗೂ ಬೀದರ್ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನಾ ಯೋಜನೆ ರೂಪಿಸಿದರು. 2018ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಈಶ್ವರ ಖಂಡ್ರೆ ಅವರನ್ನು ಎರಡನೇ ಅವಧಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿದೆ. ಇದೀಗ ಮತ್ತೆ ಸಚಿವ ಸ್ಥಾನದ ಭಾಗ್ಯ ಒಲಿದು ಬಂದಿದೆ.

ಈಶ್ವರ ಖಂಡ್ರೆ ರಾಜಕೀಯ ಜೀವನದ ಪರಿಚಯ
ಹೆಸರು
: ಈಶ್ವರ ಖಂಡ್ರೆ
ತಂದೆ ಹೆಸರು: ಭೀಮಣ್ಣ ಖಂಡ್ರೆ
ತಾಯಿ ಹೆಸರು: ಲಕ್ಷ್ಮೀಬಾಯಿ
ಜನ್ಮದಿನಾಂಕ : 15.01.1962
ವಿದ್ಯಾರ್ಹತೆ: ಬಿ.ಇ(ಮೆಕ್ಯಾನಿಕಲ್ ಎಂಜಿನಿಯರಿಂಗ್)
ಪತ್ನಿ ಹೆಸರು: ಗೀತಾ ಖಂಡ್ರೆ
ಮಕ್ಕಳು: ಗುರುಪ್ರಸಾದ, ಸಾಗರ

ರಾಜಕೀಯ
* ಕಾಂಗ್ರೆಸ್‌ನ ಸಕ್ರಿಯ ರಾಜಕಾರಣಿ
* 2004ರಲ್ಲಿ ಭಾಲ್ಕಿ ವಿಧಾನಸಭೆಯಿಂದ ಸ್ಪರ್ಧಿಸಿ ಸೋಲು
* 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೈಕ ಭಾಗದಲ್ಲೇ ಅತಿ ಹೆಚ್ಚು ಮತಗಳಿಂದ ಜಯಭೇರಿ
* 2013ರ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆಲುವು
* 2018ರಲ್ಲಿ ಹ್ಯಾಟ್ರಿಕ್ ಗೆಲುವು, ಜುಲೈ-10ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆ
* 2023ರಲ್ಲಿ ಸತತ ನಾಲ್ಕನೇ ಬಾರಿ ವಿಧಾನಸಭೆಗೆ ಆಯ್ಕೆ

ಸಹಕಾರ ಸೇವೆ: ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಗೆ ಎರಡು ಬಾರಿ ಅಧ್ಯಕ್ಷ
ಶಿಕ್ಷಣ ಸೇವೆ: 1994ರಿಂದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT