ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನಕ್ಕೆ ಕಡಿವಾಣ ಹಾಕಲು ಸರ್ಕಾರ ಬದಲಿಸಿ: ಪ್ರಿಯಾಂಕಾ ಗಾಂಧಿ

Published 3 ಮೇ 2023, 16:18 IST
Last Updated 3 ಮೇ 2023, 16:18 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂದೆ ಅಧಿಕಾರಕ್ಕೆ ಬರುವ ಯಾವ ಸರ್ಕಾರವೂ ಕಳ್ಳತನ ಮಾಡದಂತೆ ರಾಜ್ಯದ ಜನತೆ ಬದಲಾವಣೆ ತರಬೇಕು' ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತದಾರರಿಗೆ ಮನವಿ ಮಾಡಿದರು.

ಬೀದರ್ ತಾಲ್ಲೂಕಿನ ಬಗದಲ್ ತಾಂಡಾ ಸಮೀಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನಿಲ್ಲಿ ನಿಮ್ಮ ಮತ ಕೇಳಲು ಬಂದಿಲ್ಲ. ನಿಮ್ಮನ್ನು ಎಚ್ಚರಿಸಲು ಬಂದಿರುವೆ. ರಾಜ್ಯದಲ್ಲಿ ಜನರ ಸರ್ಕಾರ ಮರು ಸ್ಥಾಪಿಸಲು ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಬೇಕು’ ಎಂದು ಕೇಳಿಕೊಂಡರು.

‘ಚುನಾವಣೆ ಸಂದರ್ಭದಲ್ಲಿ ಅನೇಕ ಮುಖಂಡರು ಬಂದು ಭಾಷಣ ಮಾಡಿ ಹೋಗುತ್ತಾರೆ. ಆದರೆ, ಭಾಷಣ ಮಾಡುವ ವ್ಯಕ್ತಿ ಯಾವ ಪಕ್ಷದವರು, ನಿಜವಾಗಿಯೂ ಜನಪರವಾದ ಕೆಲಸ ಮಾಡುವವರೇ? ಎಂದು ನೋಡಬೇಕು. ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಎಂತಹ ಸ್ಥಿತಿ ಇದೆ ಎನ್ನುವುದನ್ನು ಅವಲೋಕಿಸಬೇಕು. ನಂತರವೇ ಮತ ಕೊಡಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಿದಾಗಿನಿಂದಲೂ ಕಳ್ಳತನ ಶುರುವಾಗಿದೆ. ಅನ್ಯ ಪಕ್ಷದ ಶಾಸಕರನ್ನು ಖರೀದಿಸಿ ಹೊಸ ಸರ್ಕಾರ ರಚಿಸಿತು. ಕರ್ನಾಟಕದಲ್ಲಿ ಶೇಕಡ 40ರ ಲಂಚ ಪಡೆಯುವ ಭ್ರಷ್ಟ ಸರ್ಕಾರ ಇದೆ. ಗುತ್ತಿಗೆದಾರರ ಸಂಘವೇ ಇದನ್ನು ಬಹಿರಂಗ ಪಡಿಸಿದೆ. ಪ್ರಧಾನಮಂತ್ರಿ ಅವರಿಗೆ ಲಿಖಿತ ದೂರು ಕೊಟ್ಟರೂ ಏನೂ ಮಾಡಲಿಲ್ಲ. ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು. ಶಾಸಕರ ಮನೆಯಲ್ಲಿ ₹ 8 ಕೋಟಿ ಸಿಕ್ಕಿತು. ರಾಜ್ಯ ಸರ್ಕಾರ ಏನೂ ಮಾಡಲಿಲ್ಲ. ಬಿಜೆಪಿಯವರು ನಾಚಿಕೆಬಿಟ್ಟು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅವರ ಭಾರವನ್ನು ರಾಜ್ಯದ ಜನತೆ ಹೊರಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಜನರ ಸಂಪತ್ತನ್ನೇ ಲೂಟಿ ಮಾಡಲಾಗುತ್ತಿದೆ. ಲೂಟಿ ಹಣದಲ್ಲಿ 30 ಸಾವಿರ ಸ್ಮಾರ್ಟ್‌ ಕ್ಲಾಸ್‌ ರೂಮ್‌, 250 ಕಿ.ಮೀ ಉದ್ದದ ಆರು ಪಥದ ಹೆದ್ದಾರಿ, 30 ಲಕ್ಷ ಮನೆಗಳು ನಿರ್ಮಾಣ ಮಾಡಬಹುದಿತ್ತು. ಅಡುಗೆ ಅನಿಲ ಸಿಲಿಂಡರ್, ಬೇಳೆ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ಭತ್ತ, ಕಬ್ಬಿಗೆ ಬೆಲೆ ಸಿಗುತ್ತಿಲ್ಲ. ಪ್ರತಿಯೊಂದಕ್ಕೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ಲೂಟಿ ನಿಲ್ಲುವವರೆಗೂ ರಾಜ್ಯದ ಜನತೆಯ ಕಷ್ಟ ನಿವಾರಣೆಯಾಗದು’ ಎಂದು ಹೇಳಿದರು.

‘ಬಿಜೆಪಿ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುತ್ತಿದೆ. ಮೂರೂವರೆ ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಬಿಜೆಪಿಯವರು ವಿವರವಾಗಿ ಹೇಳುವುದೇ ಇಲ್ಲ. ಅನಗತ್ಯವಾಗಿ ಧರ್ಮ, ಜಾತಿ ಹೆಸರಲ್ಲಿ ಮಾತನಾಡಿ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ರಾಜಕೀಯದಲ್ಲಿ ಕೆಟ್ಟ ಸಂಪ್ರದಾಯ ಹಾಕಿದ್ದಾರೆ’ ಎಂದು ಕಟುವಾಗಿ ಟೀಕಿಸಿದರು.

‘ಕಾರಂಜಾ ಯೋಜನೆ ಮುಳುಗಡೆ ಸಂತ್ರಸ್ತರು ಅನೇಕ ತಿಂಗಳಿಂದ ಧರಣಿ ನಡೆಸುತ್ತಿದ್ದಾರೆ. ಯಾರೊಬ್ಬರೂ ಅವರ ಬಳಿ ಅವರ ಸಮಸ್ಯೆ ಆಲಿಸಿಲ್ಲ. ಲೂಟಿ ಮಾಡಿ ಮಹಲುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹಾನಿಯಾದಾಗಲೂ ಎಚ್ಚರಗೊಳ್ಳದಿದ್ದರೆ ರಾಜ್ಯದಲ್ಲಿ ಲೂಟಿ ಹೆಚ್ಚಾಗಲಿದೆ. ಮತಗಳ ಮೂಲಕವೇ ಲೂಟಿ ಕೊನೆಗಾಣಿಸಬೇಕು ಎಂದು ಹೇಳಿದರು.

‘ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಂದಿನಿ ಸಮೃದ್ಧವಾಗಿತ್ತು. ಬಿಜೆಪಿ ಆಡಳಿತದಲ್ಲಿ ಹಾಲಿನ ಸಂಗ್ರಹ 90 ಲಕ್ಷ ಲೀಟರ್‌ನಿಂದ 70 ಲಕ್ಷ ಲೀಟರ್‌ಗೆ ಇಳಿದಿದೆ. ಎಂದು ಹೇಳುವ ಮೂಲಕ ಅಮುಲ್‌ಗೆ ಕೊಡಲು ಹುನ್ನಾರ ನಡೆಸಿದೆ. ಕೇಂದ್ರ ಸರ್ಕಾರ ಅನೇಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದೆ. ಇದನ್ನೂ ಖಾಸಗಿಯವರಿಗೆ ಕೊಡಲಿದೆ. ನಂದಿನಿ ಲೂಟಿ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಲೂಟಿ ಬಂದ್‌ ಆಗಲಿದೆ. ಅಭಿವೃದ್ಧಿ ಶುರುವಾಗಲಿದೆ. 2.50 ಲಕ್ಷ ಹುದ್ದೆಗಳಿಗೆ ಒಂದು ವರ್ಷದಲ್ಲೇ ನೇಮಕ ಮಾಡಲು ಕ್ರಮ ಕೈಗೊಳ್ಳಲಿದೆ. ಗೃಹ ಲಕ್ಷ್ಮಿ ಯೋಜನೆ ಅಡಿ ಬಡ ಮಹಿಳೆಯರ ಖಾತೆಗೆ ₹ 2 ಸಾವಿರ, ಪ್ರತಿ ಮನೆಗೆ 200 ಯುನಿಟ್‌ ಉಚಿತವಾಗಿ ದೊರೆಯಲಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಆಟೊಮೊಬೈಲ್, ಎಲೆಕ್ಟ್ರಿಕಲ್‌ ಉಪಕರಣಗಳ ತಯಾರಿಕೆ ಘಟಕ ನಿರ್ಮಿಸಲಾಗುವುದು. ಬೀದರ್‌ ನಿಂದ ಚಾಮರಾಜನಗರ ವರೆಗೆ ಇಂಡ್‌ಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣವಾಗಲಿದೆ. ಕೈಗಾರಿಕೆ ಸ್ಟಾರ್ಟ್‌ಅಪ್‌ಗೆ ಉತ್ತೇಜನ ದೊರೆಯಲಿದೆ. ಮಂಗಳೂರಲ್ಲಿ ಚಿನ್ನಾಭರಣ ತಯಾರಿಕೆ ಪಾರ್ಕ್, ಮೈಸೂರು, ಹುಬ್ಬಳ್ಳಿ, ಧಾರವಾಡದಲ್ಲಿ ಐಟಿ, ಟೆಕ್‌ ಸೆಕ್ಟರ್‌ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

‘ಎಲೆಕ್ಟ್ರಿಕಲ್‌ ವಾಹನ ನಿರ್ಮಾಣಕ್ಕೆ ಕರ್ನಾಟಕವನ್ನು ಹಬ್‌ ಮಾಡಲಾಗುವುದು. ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ವರೆಗೆ ಹಾರ್ಡ್‌ ಪಾರ್ಕ್‌ ನಿರ್ಮಿಸಲಾಗುವುದು. ಸ್ಥಳೀಯರ ಕಲ್ಯಾಣ ಮಂಡಳಿ ಸ್ಥಾಪಿಸಲಾಗುವುದು. ಇದರಲ್ಲಿ ಆಟೊರಿಕ್ಷಾ ಚಾಲಕರಿಗೂ ಅವಕಾಶ ಕಲ್ಲಿಸಲಾಗುವುದು. ಒಟ್ಟಾರೆ ₹ 3 ಸಾವಿರ ಕೋಟಿ ಕಾಯ್ದಿರಿಸಲಾಗುವುದು’ ಎಂದು ಭರವಸೆ ನೀಡಿದರು.

ಬೀದರ್ ತಾಲ್ಲೂಕಿನ ಬಗದಲ್ ತಾಂಡಾ ಸಮೀಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ
ಬೀದರ್ ತಾಲ್ಲೂಕಿನ ಬಗದಲ್ ತಾಂಡಾ ಸಮೀಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ

Cut-off box - ಆಗ ಟ್ರೇಲರ್‌ ಈಗ ಸಿನಿಮಾ ನಿರ್ಮಾಣ ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಮಾತನಾಡಿ ‘ಗ್ರಾಮಗಳಲ್ಲಿ ಮಹಿಳೆಯರು ಇಂದಿಗೂ ತಮ್ಮ ಮನೆಗಳಲ್ಲಿ ಇಂದಿರಾ ಗಾಂಧಿ ಪೊಟೊ ಪೂಜಿಸುತ್ತಿದ್ದರು. ಇನ್ನೂ 10 ಪೀಳಿಗೆ ಇಂದಿರಾ ಗಾಂಧಿ ಅವರನ್ನು ಸ್ಮರಿಸಲಿದ್ದಾರೆ. ನಾನು ಮೊದಲ ಬಾರಿಗೆ ಕರ್ನಾಟಕ ಮಕ್ಕಳ ಪಕ್ಷದಿಂದ ಗೆದ್ದಿದ್ದೆ. ಇಲ್ಲಿ ಎರಡು ತಾಸು ಮಾತ್ರ ವಿದ್ಯುತ್‌ ಇರುತ್ತಿತ್ತು. ರಸ್ತೆಗಳೂ ಸರಿಯಾಗಿ ಇರಲಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ 12 ಸಾವಿರ ಮನೆಗಳನ್ನು ವಿತರಿಸಲಾಯಿತು. 900 ಕಿ.ಮೀ ರಸ್ತೆ ಮಾಡಿದೇವು. ಆಸ್ಪತ್ರೆಗಳನ್ನು ನಿರ್ಮಿಸಿದೇವು. ಮೊದಲು ಟ್ರೇಲರ್‌ ಇತ್ತು. ಸಿನಿಮಾ ಇನ್ನು ನಿರ್ಮಾಣವಾಗಲಿದೆ’ ಎಂದರು.

‘ಮೇ 10ರಂದು ಜನ ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಲಿದ್ದಾರೆ. ಪ್ರಿಯಾಂಕಾ ಅವರು ವಿಜಯೋತ್ಸವ ಆಚರಿಸಲು ಇಲ್ಲಿಗೆ ಬರಬೇಕು’ ಎಂದು ಮನವಿ ಮಾಡಿದರು. ‘ಕಾರಂಜಾ ಯೋಜನೆ ಸಂತ್ರಸ್ತರ ಪುನರ್ವಸತಿ ಸರಿಯಾಗಿ ಆಗಿಲ್ಲ. ಅವರಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಇದರಿಂದ 50 ಸಾವಿರ ಸಂತ್ರಸ್ತರಿಗೆ ಅನುಕೂಲವಾಗಲಿದೆ. ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೆ ಸುಳ್ಳು ಹೇಳುವುದಿಲ್ಲ. ಐದು ವರ್ಷಗಳಲ್ಲಿ 10 ಸಾವಿರ ಉದ್ಯೋಗ ಕೊಡಲು ನಿರ್ಧರಿಸಿದ್ದೇವೆ. ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ವಾಗತಿಸಿದರು. ಹಿರಿಯ ಮುಖಂಡರಾದ ಶ್ರೀಧರ ಬಾಬು ಸಲೀಂ ಅಹಮ್ಮದ್ ಕಾಂಗ್ರೆಸ್‌ನ ಹುಮನಾಬಾದ್‌ ಅಭ್ಯರ್ಥಿ ರಾಜಶೇಖರ ಪಾಟೀಲ ಬೀದರ್‌ ಕ್ಷೇತ್ರದ ಅಭ್ಯರ್ಥಿ ರಹೀಂ ಖಾನ್ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮೀನಾಕ್ಷಿ ಸಂಗ್ರಾಮ ಗೀತಾ ಚಿದ್ರಿ ಸಂಜಯ ಖೇಣಿ ಮನ್ನಾನ್ ಸೇಠ್ ಇರ್ಷಾದ್ ಪೈಲ್ವಾನ್ ಸಂಜಯ ಜಾಗೀರದಾರ್‌ ಗುರಮ್ಮ ಸಿದ್ದಾರೆಡ್ಡಿ ಶೇಖ ಉಜಮಾ ಮಾಲಾ ನಾರಾಯಣರಾವ್ ರೋಹಿದಾಸ ಘೋಡೆ ಅಮೃತರಾವ್ ಚಿಮಕೋಡೆ ಶ್ರೀಕಾಂತ ಸ್ವಾಮಿ ದತ್ತಾತ್ರಿ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT