ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯಲ್ಲಿ ಸಾಧಾರಣ ಮಳೆ

Last Updated 15 ಜುಲೈ 2020, 15:06 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬುಧವಾರ ಸಾಧಾರಣದಿಂದ ಭಾರಿ ಮಳೆಯಾಗಿದೆ.

ಬೀದರ್ ನಗರದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಅರ್ಧ ಗಂಟೆ ಮಳೆ ಜೋರಾಗಿ ಸುರಿದಿದೆ. ಹುಮನಾಬಾದ್, ಚಿಟಗುಪ್ಪ, ಔರಾದ್, ಕಮಲನಗರ, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲೂ ಮಳೆಯಾಗಿದೆ.


ಗುರುವಾರದಿಂದ ಜಿಲ್ಲೆಯಲ್ಲಿ ಲಾಕ್ಡೌನ್ ಇರುವ ಕಾರಣ ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದ ಜನ ಮಳೆಯಿಂದಾಗಿ ಪರದಾಡುವಂತಾಯಿತು.

ಬ್ರಿಮ್ಸ್ ವಿದ್ಯಾರ್ಥಿ ವಸತಿ ನಿಲಯದ ಸಮೀಪ ಮರವೊಂದು ಉರುಳಿ ಬಿದ್ದು ವಿದ್ಯುತ್ ತಂತಿ ಕಡಿದು ನಾಲ್ಕು ಗಂಟೆಗಳ ಕಾಲ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಕಮಲನಗರದಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದ ವರದಿಯಾಗಿದೆ.

ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಆರಂಭವಾದ ಮಳೆ ಬಿಟ್ಟು ಬಿಟ್ಟು ಸಂಜೆವರೆಗೂ ಮುಂದುವರಿಯಿತು.

ಮಳೆಯ ಕಾರಣ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡಿತ್ತು. ಜನವಾಡ ರಸ್ತೆ, ತಾಲ್ಲೂಕು ಪಂಚಾಯಿತಿ ಮುಂಭಾಗ, ರೋಟರಿ ವೃತ್ತ ಸಮೀಪ, ಶಿವನಗರ ರಸ್ತೆ, ಹಾರೂರಗೇರಿ ಕಮಾನ್, ಮನ್ನಳ್ಳಿ ರಸ್ತೆ, ಚಿದ್ರಿ ರಸ್ತೆ ಸೇರಿದಂತೆ ನಗರದ ವಿವಿಧೆಡೆ ರಸ್ತೆಗಳಲ್ಲಿ ನೀರು ಸಂಗ್ರಹವಾಗಿತ್ತು.
ಅಶೋಕ ಹೋಟೆಲ್ನಿಂದ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತುಕೊಂಡು ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸೇತುವೆ ಕೆಳಗಿನ ರಸ್ತೆಯಲ್ಲಿನ ತಗ್ಗುಗಳು ಕಾಣಿಸದೆ ಅನೇಕ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು.

ರೈತರ ಮೊಗದಲ್ಲಿ ಮೂಡಿದ ಸಂತಸ

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ಉಂಟು ಮಾಡಿದೆ.
ಸಕಾಲಕ್ಕೆ ಸುರಿದ ಮಳೆಯು ಮುಂಗಾರು ಹಂಗಾಮಿನಲ್ಲಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿ ಇರುವ ರೈತರ ಆತ್ಮಬಲ ಇಮ್ಮಡಿಗೊಳಿಸಿದೆ.

ಮಳೆಯಿಂದ ಸೋಯಾ, ಉದ್ದು, ಹೆಸರು ಬೆಳೆಗೆ ನೆರವಾಗಿದೆ. ಎರಡು ವಾರಗಳ ನಂತರ ಸರಿಯಾದ ಸಮಯಕ್ಕೆ ಮಳೆ ಬಂದಿದೆ ಎಂದು ಹೇಳುತ್ತಾರೆ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರವಿ ಸಿದ್ದಾಪುರ.

ಹಿಂಗಾರು ಹಂಗಾಮಿನಲ್ಲಿ ಹೇಳಿಕೊಳ್ಳುವಂತಹ ಬೆಳೆ ಬಂದಿಲ್ಲ. ಕೊರೊನಾ ಸೋಂಕು ತಡೆಗೆ ವಿಧಿಸಿದ್ದ ಲಾಕ್ಡೌನ್ನಿಂದ ತೊಂದರೆಯಲ್ಲಿ ಇರುವ ರೈತರು ಮುಂಗಾರು ಹಂಗಾಮಿನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ತಿಳಿಸುತ್ತಾರೆ.

ಮಳೆಯಿಂದ ಜಿಲ್ಲೆಯ ರೈತರ ಪಾಲಿನ ವಾಣಿಜ್ಯ ಬೆಳೆಯಾಗಿರುವ ಉದ್ದು, ಹೆಸರಿಗೆ ಜೀವ ಕಳೆ ಬಂದಿದೆ. ಈ ಬಾರಿ ಮುಂಗಾರು ಕೈಹಿಡಿಯುವ ವಿಶ್ವಾಸ ಇದೆ ಎಂದು ಹೇಳುತ್ತಾರೆ ಭಾಲ್ಕಿ ಕೃಷಿಕ ಸಮಾಜದ ಮಾಜಿ ನಿರ್ದೇಶಕ ಜೈನಾಪುರದ ಚಂದ್ರಕಾಂತ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT