ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಜನಪರವಾಗಿ ಮುಂದುವರಿಯಲಿ: ಪ್ರೊ.ಹಾವಗಿರಾವ್ ಮೈಲಾರೆ

ಪ್ರೊ.ಹಾವಗಿರಾವ್ ಮೈಲಾರೆ ಹೇಳಿಕೆ
Last Updated 18 ಜನವರಿ 2021, 14:45 IST
ಅಕ್ಷರ ಗಾತ್ರ

ಬೀದರ್: ‘ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕುಟುಂಬ ಕೇಂದ್ರೀಕೃತವಾಗಬಾರದು. ಕಸಾಪ ಚಟುವಟಿಕೆಗಳು ಜನಪರವಾಗಲು ಸಮುದಾಯದ ಮಧ್ಯೆ ಕಾರ್ಯಕ್ರಮಗಳನ್ನು ನಡೆಸಬೇಕು ಹಾಗೂ ಅದು ನಿರಂತರವಾಗಿ ಮುಂದುವರಿಯಬೇಕು’ ಎಂದು ಪ್ರೊ. ಹಾವಗಿರಾವ್ ಮೈಲಾರೆ ನುಡಿದರು.

ನಿವೃತ್ತ ಮುಖ್ಯ ಮುಖ್ಯಶಿಕ್ಷಕ ಬಾಬುರಾವ್ ದಾನಿ ಅವರ ಮನೆಯಲ್ಲಿ 36ನೇಯ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೆಲವು ಚಟುವಟಿಕೆಗಳು ಹಿಂದೆ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾದಂತೆ ಇದ್ದವು. ಇಂದು ಕಸಾಪ ಕಾರ್ಯಕ್ರಮಗಳು ಜನಸಮುದಾಯಕ್ಕೆ ಸುಲಭವಾಗಿ ತಲುಪಿಸುತ್ತಿರುವುದು ಶ್ಲಾಘನೀಯ. ಇದರ ಜತೆಗೆ ಕನ್ನಡೇತರ ಸಾಧಕರ ಮನೆಗೂ ಪರಿಷತ್ತು ತೆರಳುವಂತಾಗಬೇಕು’ ಎಂದು ಹೇಳಿದರು.

‘ಹಿಂದಿನ ಕನ್ನಡ ಸಾಹಿತ್ಯ ಪರಷತ್ತಿನ ಚಟುವಟಿಕೆಗೂ, ಇಂದಿನ ಪರಿಷತ್ತಿನ ಚಟುವಟಿಕೆಗೂ ಹೋಲಿಸಿದರೆ ಬಹಳ ಭಿನ್ನವಾಗಿ ಕಾಣುತ್ತಿದೆ. ಹಿಂದೆ ಪರಾಮಪ್ತರಿಗೆ ಮಾತ್ರ ಗೌರವ ದೊರಕುತ್ತಿತ್ತು. ಆದರೆ, ಇಂದು ಕಸಾಪ ಹಲವು ಸಾಧಕರನ್ನು ಗುರುತಿಸಿ ಅವರ ಮನೆಯಂಗಳದಲ್ಲಿಯೇ ಬಂದು ಅವರ ಬದುಕು ಮತ್ತು ಸಾಧನೆ ಪರಿಚಯಿಸುವ ಕಾರ್ಯಮಾಡುತ್ತದೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಸ್ಮರಣಿಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.

ಬಾಬುರಾವ್‌ ದಾನಿ ಮಾತನಾಡಿ, ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ಶಿಕ್ಷಕ ಚನ್ನಬಸಪ್ಪ ಸುಮಿತ್ರಾಬಾಯಿ ದಂಪತಿಯ ಪುತ್ರನಾದ ನಾನು ಧನ್ನೂರಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಹಲಬರ್ಗಾದಲ್ಲಿ ಪಿಯುಸಿ. ಬೀದರ್‌ನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಬಿಎಸ್‌ಸಿ, ಬಿಇಡಿ ಪದವಿ ಪಡೆದುಕೊಂಡೆ. ಎಂಎಸ್‌ಸಿ, ಎಂಇಡಿ ಪೂರ್ಣಗೊಳಿಸಿ
1985 ರಲ್ಲಿ ಶಿಕ್ಷಕರ ಹುದ್ದೆಗೆ ಸೇರಿದೆ’ ಎಂದು ತಿಳಿಸಿದರು.

‘1987ರಿಂದ ವಿಜ್ಞಾನ ಪ್ರಯೋಗ ಮಾಡುವುದರ ಜತೆಗೆ ಸತತವಾಗಿ 6 ವರ್ಷಗಳ ಕಾಲ ಜಿಲ್ಲಾ ಮತ್ತು ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರರ್ದಶನದಲ್ಲಿ ಬಹುಮಾನ ಪಡೆದ ಹಿರಿಮೆ ನನ್ನದು. ಇದೇ ಅವಧಿಯಲ್ಲಿ 200 ಉಪನ್ಯಾಸ ಕಾರ್ಯಕ್ರಮಗಳನ್ನೂ ಆಯೋಜಸಿ, ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದೆ’ ಎಂದು ಹೇಳಿದರು.

‘ತಂದೆಯವರ ಅಗಲಿಕೆಯ ನಂತರ ಕುಟುಂಬದ ಜವಾಬ್ದಾರಿ ನನ್ನ ಮೇಲೇಯೇ ಬಿತ್ತು. ನನ್ನೆಲ್ಲ ಸಹೋದರರಿಗೂ ಶಿಕ್ಷಣ ಮತ್ತು ಉದ್ಯೋಗ ಕೊಡಿಸಿ ತಂಗಿಯ ಮದುವೆಯನ್ನು ಮಾಡಿಕೊಟ್ಟೆ. ಕೊನೆಗೆ 1989ರಲ್ಲಿ ಸೇಡಂನ ಶಿವಕಾಂತಾ ಅವರನ್ನು ಮದುವೆ ಮಾಡಿಕೊಂಡು ಬೀದರ್‌ಗೆ ಬಂದು ನೆಲೆಸಿದೆ’ ಎಂದು ತಿಳಿಸಿದರು.

‘1996ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ಚುನಾಯಿತನಾಗಿ ಎಚ್. ನರಸಿಂಹಯ್ಯ ಮತ್ತು ಸ.ಜ.ನಾಗಲೋಟಿಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಾದ್ಯಂತ ವಿಜ್ಞಾನ ಕಾರ್ಯಕ್ರಮಗಳನ್ನು ಸಂಘಟಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಿದೆ’ ಎಂದರು.

‘ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ಬೀದರ್ ಜಿಲ್ಲೆಯಲ್ಲಿ ಭಾನಾಮತಿ ನಿರ್ಮೂಲನಾ ನಾಂದೋಲನ ಸಮಿತಿಯ ಮೂಲಕ ಜಿಲ್ಲೆಯ ನೂರು ಹಳ್ಳಿಗಳಲ್ಲಿ ಪವಾಡ ಬಯಲು ಕಾರ್ಯಕ್ರಮ ನಡೆಸಿದೆ. ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರ ನೇತೃತ್ವದಲ್ಲಿ ಬೀದರ್ ನಗರದಲ್ಲಿ ವಿಜ್ಞಾನ ಕೇಂದ್ರ ಪ್ರಾರಂಭಿಸಿದೆ. ವಿಜ್ಞಾನಿ ಎ.ಪಿ.ಜಿ. ಅಬ್ದುಲ್ ಕಲಾಂ ಅವರಿಂದ ಉದ್ಘಾಟಿಸಲಾಯಿತು ಎಂದು ಸ್ಮರಿಸಿದರು.

‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಎನ್ ಎಸ್. ಸಿ. ವತಿಯಿಂದ ಪ್ರಶಂಸನಾ ಪತ್ರ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳು ಸಂದಿವೆ. ನಿವೃತ್ತನಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಹೇಳಿದರು.

ಸಂವಾದಕರಾದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷ ದೇವಿಪ್ರಸಾದ ಕಲಾಲ, ಐಎಂಎ ಕಾರ್ಯದರ್ಶಿ ಡಾ.ಸತೀಶುಕುಮಾರ ಮುರಬಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಆಶಯ ನುಡಿ ನುಡಿದರು. ಕಸಾಪ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.

ಡಾ.ಸಿ.ಆನಂದರಾವ್, ಪತ್ರಕರ್ತ ಗಂಧರ್ವ ಸೇನಾ, ನಾಗಶೆಟ್ಟಿ ಧರಮಪುರೆ, ರಮೇಶ ಬಿರಾದಾರ, ಎಸ್.ವಿ.ಕಲ್ಮಠ, ಪ್ರೊ.ದೇವೇಂದ್ರ ಕಮಲ್, ಪ್ರೊ.ಪ್ರಭುಶೆಟ್ಟಿ ಭುಳ್ಳಾ, ಕಸ್ತೂರಿ ಪಟಪಳ್ಳಿ, ವಕೀಲ ಧನರಾಜ ಬಿರಾದಾರ, ವೀರೇಶ ಬಿರಾದಾರ, ಸಂದೀಪ ಉದಗಿರೆ ಇದ್ದರು.ಜಗನ್ನಾಥ ಕಮಲಾಪೂರೆ ನಿರೂಪಿಸಿದರು. ಶಿವುಮಾರ ಕಟ್ಟೆ ಸ್ವಾಗತಿಸಿದರು. ಟಿ.ಎಂ.ಮಚ್ಛೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT