ಸೋಮವಾರ, ಸೆಪ್ಟೆಂಬರ್ 20, 2021
21 °C
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ; ರೈತರಿಗೆ ಒಂದು ತಿಂಗಳಲ್ಲಿ ಪರಿಹಾರ ಹಣ ಸಿಗಲಿ

ಬೆಳೆ ವಿಮೆ ಪರಿಹಾರ ವಿಳಂಬ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾದರೂ ವಿಮಾ ಕಂಪನಿಗಳು ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಪರಿಹಾರ ಕೊಡದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಬೆಳೆ ಹಾನಿಗೆ ಒಳಗಾದ ರೈತರಿಗೆ ಒಂದು ತಿಂಗಳಲ್ಲಿ ವಿಮಾ ಕಂಪನಿ ಬೆಳೆ ಪರಿಹಾರ ಹಣ ಪಾವತಿಸಬೇಕು. ಪರಿಹಾರ ಕೊಡಲು ವಿಳಂಬ ಮಾಡಿದರೆ ಬಡ್ಡಿ ಸಹಿತ ಹಣ ವಸೂಲಿ ಮಾಡುವುದು ಅನಿವಾರ್ಯವಾಗಲಿದೆ. ಯಾವುದೇ ಸಬೂಬು ಹಾಗೂ ತಾಂತ್ರಿಕ ಕಾರಣಗಳನ್ನು ಕೊಡದೆ ರೈತರ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಮಾಡಬೇಕು ಎಂದು ಶಾಸಕರು ಪಕ್ಷ ಭೇದ ಮರೆತು ಒಕ್ಕೊರಲಿನಿಂದ ಒತ್ತಾಯಿಸಿದರು.

ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆಯಲ್ಲಿ ಬೀದರ್‌ ಜಿಲ್ಲೆಯ ಅತಿ ಹೆಚ್ಚು ರೈತರು ಬೆಳೆ ನೋಂದಣಿ ಮಾಡಿಕೊಂಡಿದ್ದಾರೆ. ವಿಮಾ ಕಂಪನಿ ರೈತರಿಂದ ಕಂತು ಭರಿಸಿಕೊಂಡು ಒಂದು ವರ್ಷದಲ್ಲೇ ಸುಮಾರು ₹ 250 ಕೋಟಿ ಲಾಭ ಮಾಡಿಕೊಂಡಿದೆ. ಬೆಳೆ ವಿಮೆ ನೋಂದಣಿ ಮಾಡಿಕೊಂಡ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಸಭೆಯ ಆರಂಭದಲ್ಲೇ ಸಚಿವ ಪ್ರಭು ಚವಾಣ್‌ ಅವರು ಕೃಷಿ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬೆಳೆ ವಿಮೆ ಪಾವತಿಯಾಗದಿರುವ ಬಗ್ಗೆ ರೈತರು ನಿತ್ಯ ಕರೆ ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಘೇರಾವ್‌ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಗೊಂಡು ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.

‘ಬೆಳೆ ವಿಮೆ ಅರ್ಜಿ ತಿರಸ್ಕರಿಸಿದ್ದರೆ ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎನ್ನುವ ಕುರಿತು ರೈತರಿಗೆ ಸ್ಪಷ್ಟವಾದ ಮಾಹಿತಿ ಕೊಡಬೇಕು. ಶುಲ್ಕ ಪಾವತಿಸಿ ನೋಂದಣಿ ಮಾಡಿದ ರೈತನಿಗೆ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಕಾರಣ ತಿಳಿದುಕೊಳ್ಳುವ ಪೂರ್ಣ ಅಧಿಕಾರ ಇದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿ, ‘ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಒಂದು, ಸಚಿವರಿಗೆ ಇನ್ನೊಂದು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ಸಭೆಗೆ ಸರಿಯಾದ ಮಾಹಿತಿ ಕೊಡಬೇಕು. ರೈತರಿಗೆ ಬೆಳೆ ವಿಮೆ ಪರಿಹಾರ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ರೈತರಿಗೆ ಯೋಜನೆಯ ಬಗೆಗೆ ಸರಿಯಾದ ತಿಳಿವಳಿಕೆ ಕೊಡಬೇಕು. ಬೆಳೆ ನಷ್ಟವಾದರೆ ತಿಂಗಳಲ್ಲಿ ಅವರಿಗೆ ಪರಿಹಾರ ನೀಡಬೇಕು. ಬಡ್ಡಿಗಾಗಿ ರೈತರ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಕೊಳ್ಳಬಾರದು’ ಎಂದು ಎಚ್ಚರಿಕೆ ನೀಡಿದರು.

‘ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಕೊಡಿಸಲು ಆದ್ಯತೆ ನೀಡಬೇಕು. ವಿಮಾ ಕಂಪನಿಗಳ ಬೆಂಬಲಕ್ಕೆ ನಿಲ್ಲುವ ಬದಲು ರೈತರ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಮಾತನಾಡಿ, ‘2019ರಲ್ಲಿ 21 ಅರ್ಜಿಗಳು ತಿರಸ್ಕೃತಗೊಂಡಿವೆ. 2019–2020ರಲ್ಲಿ 53,300 ರೈತರಿಗೆ ₹ 50 ಕೋಟಿ ಪರಿಹಾರ ಕೊಡಲಾಗಿದೆ. ಪ್ರಸಕ್ತ ವರ್ಷ 8,076 ರೈತರಿಗೆ ಬೆಳೆ ವಿಮೆ ಪರಿಹಾರ ದೊರಕಿಲ್ಲ. ಬೀದರ್ ಜಿಲ್ಲೆಗೆ ಈವರೆಗೆ ₹ 70 ಕೋಟಿ ಬೆಳೆ ವಿಮೆ ಪರಿಹಾರ ಬರಬೇಕಿತ್ತು. ₹ 58 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನೂ 12 ಕೋಟಿ ಬರಬೇಕಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಮೊದಲೇ ಸಂಕಷ್ಟದಲ್ಲಿ ಇದ್ದಾರೆ. ವಿಮಾ ಕಂಪನಿಗಳು ಬೆಳೆ ಪರಿಹಾರವನ್ನೂ ಕೊಡದಿದ್ದರೆ ಕಷ್ಟವಾಗಲಿದೆ. ವಿಮಾ ಕಂಪನಿಗಳು ತಕ್ಷಣ ಬೆಳೆ ಪರಿಹಾರ ಪಾವತಿಸುವಂತೆ ಕ್ರಮಕೈಗೊಳ್ಳಬೇಕು’ ಎಂದರು.

ಶಾಸಕರಾದ ರಹೀಂ ಖಾನ್, ಶರಣು ಸಲಗರ, ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌., ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ವಿಮಾ ಕಂಪನಿಗೆ ಲಾಭ:

‘ಬೀದರ್ ಜಿಲ್ಲೆಯ 1.77 ಲಕ್ಷ ರೈತರು ವಿಮಾ ಕಂಪನಿಗೆ ₹ 186 ಕೋಟಿ ಪಾವತಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪಾಲು ಸೇರಿ ಯನಿವರ್ಸಲ್‌ ಸೊಮೊ ಕಂಪನಿಗೆ ₹ 250 ಕೋಟಿ ಲಾಭ ಆಗಿದೆ. ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿ ವಿಮಾ ಕಂಪನಿಗೆ ಲಾಭ ಮಾಡಿಕೊಟ್ಟಿದೆ’ ಎಂದು ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.

‘ಜಿಲ್ಲೆಯ 2.74 ಲಕ್ಷ ರೈತರು ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡು ವಿಮಾ ಕಂಪನಿಗೆ ₹ 9 ಕೋಟಿ ಪಾವತಿಸಿದ್ದಾರೆ. ವಿಮಾ ಕಂಪನಿಗೆ ಕೇಂದ್ರ ಸರ್ಕಾರ ₹ 59 ಕೋಟಿ ಹಾಗೂ ರಾಜ್ಯ ಸರ್ಕಾರ ₹ 34 ಕೋಟಿ ನೀಡಿದೆ ಎಂದು ತಿಳಿಸಿದರು.

‘₹ 100ಗೆ ಸುಪಾರಿ ಕೊಡುವ ಹಾಗೂ ₹ 10 ಕದಿಯುವ ವ್ಯಕ್ತಿಗೆ ಜೈಲು ಆಗುವ ಇಂದಿನ ದಿನಗಳಲ್ಲಿ ವಿಮಾ ಕಂಪನಿಯೊಂದು ರೈತರಿಂದ ಕೋಟ್ಯಂತರ ಹಣ ಪಡೆದರೂ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೋವಿಡ್‌‌ನಿಂದ 2 ಸಾವಿರ ಜನರ ಸಾವು:

ಜಿಲ್ಲೆಯಲ್ಲಿ ಕೋವಿಡ್‌ ಅವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆ ಸುಳ್ಳು ಮಾಹಿತಿ ನೀಡುತ್ತಿದೆ. ಜಿಲ್ಲಾಡಳಿತ ಮತ್ತೊಮ್ಮೆ ಪರಿಶೀಲನೆ ನಡೆಸಿ ಕೋವಿಡ್‌ನಿಂದ ಮೃತಪಟ್ಟವರ ನಿಖರ ಮಾಹಿತಿ ಸಂಗ್ರಹಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.

ಬೀದರ್‌ನಲ್ಲಿ ಒಂದೇ ದಿನ 53 ಮಂದಿ ಮೃತಪಟ್ಟರೂ ಆರೋಗ್ಯ ಇಲಾಖೆ ಅಧಿಕಾರಿ ಕೇವಲ 6 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ತಪ್ಪು ಮಾಹಿತಿ ಕೊಟ್ಟವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡುತ್ತಿಲ್ಲ. 108 ಆರೋಗ್ಯ ಸೇವೆಯೂ ಜನರಿಗೆ ಸರಿಯಾಗಿ ದೊರಕುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

‘108 ಆರೋಗ್ಯ ಸೇವೆ ಯೋಜನೆಯ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಲಾಗಿದೆ. ಡಯಾಲಿಸಿಸ್‌ ನಿರ್ವಹಣೆ ಹೊಣೆಯನ್ನು ಖಾಸಗಿ ಏಜೆನ್ಸಿಗೆ ಕೊಡಲಾಗಿದೆ. ಸಿಬ್ಬಂದಿಗೆ ವೇತನ ಪಾವತಿಯಾಗದ ಕಾರಣ ಸೇವೆ ಸ್ಥಗಿತಗೊಂಡಿರುವ ಮಾಹಿತಿ ಇದೆ. ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ನಿವಾರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದರು.

‘ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ 396 ಜನ ಮಾತ್ರ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಬದಲಾಗಿದೆ. ಹೊಸದಾಗಿ ಮಾಹಿತಿ ಪರಿಷ್ಕರಿಸಲಾಗುವುದು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.