ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಂಘರ್ಷ ಸಮಿತಿಯಿಂದ ಧರಣಿ

ಪೌರತ್ವ ತಿದ್ದುಪಡಿ ಕಾಯ್ದೆ ಕೈಬಿಡಲು ಆಗ್ರಹ
Last Updated 24 ಜನವರಿ 2020, 16:19 IST
ಅಕ್ಷರ ಗಾತ್ರ

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)ಯನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.

ಮೂರೂ ಕಾಯ್ದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ. ಈ ಕಾಯ್ದೆಗಳಿಂದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಅಧಿಕ ಮುಖ ಬೆಲೆಯ ನೋಟುಗಳ ರದ್ದತಿ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸಿದ್ದಾರೆ. ಸರ್ಕಾರ ಸರ್ವರಿಗೂ ಒಳಿತು ಉಂಟು ಮಾಡುವ ಕಾಯ್ದೆಯನ್ನು ರೂಪಿಸಬೇಕು. ಆದರೆ, ಒಂದು ಜಾತಿ ಅಥವಾ ಧರ್ಮವನ್ನು ಬಿಟ್ಟು ಕಾನೂನು ರೂಪಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರು ಮಾತ್ರವಲ್ಲ, ಇತರರೂ ಸಮಸ್ಯೆ ಎದುರಿಸಬೇಕಾಗಲಿದೆ. ಎನ್‍ಆರ್‌ಸಿಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವ ಮಾಹಿತಿ ನೀಡಿಲ್ಲ. ಹೀಗಾಗಿ ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಭದ್ರತೆ, ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಲಿದೆ. ಇದೇ ಕಾರಣಕ್ಕಾಗಿ ಕಾಯ್ದೆಗೆ ರಾಜಕೀಯ ಮುಖಂಡರು, ದೇಶದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಎಎ, ಎನ್‍ಆರ್‌ಸಿ, ಎನ್‌ಪಿಆರ್‌ನಿಂದ ಲಕ್ಷಾಂತರ ಹಿಂದೂಗಳಿಗೆ ತೊಂದರೆಯಾಗಲಿದೆ. ದೇಶದಲ್ಲಿರುವ ಶೇ 80ರಷ್ಟು ದಲಿತರ ಬಳಿ ದಾಖಲೆಗಳೇ ಇಲ್ಲ. ಗಿರಿಜನರು, ಬಡ ಬ್ರಾಹ್ಮಣರು, ಒಕ್ಕಲಿಗರು, ಬಂಟರು, ಬಿಲ್ಲವರು ಸೇರಿದಂತೆ ಎಲ್ಲ ವರ್ಗದಲ್ಲಿ ದಾಖಲೆಗಳಲ್ಲಿದ ಅನೇಕರು ಇದ್ದಾರೆ ಎಂದು ಹೇಳಿದರು.

ಸಿಎಎ, ಎನ್‍ಆರ್‌ಸಿ ಹಾಗೂ ಎನ್‌ಪಿಆರ್‌ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿಯ ವಿಭಾಗೀಯ ಸಂಚಾಲಕ ಸಂಜುಕುಮಾರ ಮೇಟಿ, ಸಂಘಟನಾ ಸಂಚಾಲಕ ಬುದ್ಧ ಪ್ರಕಾಶ ಹರಗೆ, ಜಿಲ್ಲಾ ಪ್ರಧಾನ ಸಂಚಾಲಕ ರಾಜಕುಮಾರ ಬನ್ನೇರ, ಸಂಘಟನಾ ಸಂಚಾಲಕರಾದ ಝರೆಪ್ಪ ರಾಂಪೂರೆ, ಬಸವರಾಜ ಸಾಗರ, ಸುಭಾಷ ಜ್ಯೋತಿ, ಬಾಬುರಾವ್ ಮಾಲೆ, ಪ್ರಹ್ಲಾದ್ ಕಾಂಬಳೆ, ಮರೆಪ್ಪ ಅರಳಿ, ಭಾಲ್ಕಿ ತಾಲ್ಲೂಕು ಸಂಚಾಲಕ ರಾಜಕುಮಾರ ಕಾಳೇಕರ್, ಮುಖಂಡರಾದ ಅಶೋಕಕುಮಾರ ಹೊಸಮನಿ, ರಂಜೀತಾ ಜೈನೂರೆ, ರಮೇಶ ಸಾಗರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT