ಸುಳ್ಳು ಮಾಹಿತಿ ಆರೋಪ: ಖಂಡ್ರೆ ವಿರುದ್ಧ ಖೂಬಾ ದೂರು

ಶನಿವಾರ, ಏಪ್ರಿಲ್ 20, 2019
24 °C
ನಾಮಪತ್ರ ತಿರಸ್ಕರಿಸಲು ಒತ್ತಾಯ

ಸುಳ್ಳು ಮಾಹಿತಿ ಆರೋಪ: ಖಂಡ್ರೆ ವಿರುದ್ಧ ಖೂಬಾ ದೂರು

Published:
Updated:

ಬೀದರ್: ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಕಾರಣ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಬಿಜೆಪಿಯ ಅಭ್ಯರ್ಥಿ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಶುಕ್ರವಾರ ಅವರು ಈ ಕುರಿತು ದೂರು ಸಲ್ಲಿಸಿದ್ದಾರೆ.

ಖಂಡ್ರೆ ಅವರು ಹುಸಿ ಹಾಗೂ ಅಪೂರ್ಣ ಮಾಹಿತಿ ನೀಡಿದ್ದಾರೆ. ತನ್ನ ಹೆಸರಲ್ಲಿ ಕೃಷಿ ಜಮೀನು ಇಲ್ಲ ಎಂದಿದ್ದಾರೆ. ಆದರೆ, ಭಾಲ್ಕಿಯ ಸರ್ವೇ ನಂ. 45/ಇ ರಲ್ಲಿ 2.12 ಎಕರೆ ಜಮೀನು ಪತ್ನಿ ಜತೆ ಜಂಟಿ ಖಾತೆ ಹೊಂದಿದ್ದಾರೆ. ಈ ಜಮೀನಿನ ಪಹಣಿಯಲ್ಲಿ ಗೀತಾ ಗಂಡ ಅಜಯಕುಮಾರ, ಉಪ ನಾಮ ಈಶ್ವರ ಖಂಡ್ರೆ ಎಂದು ಇಂದಿಗೂ ಇದೆ. ಹಾಗಾದರೆ ಇವರ ನಿಜವಾದ ಹೆಸರು ಅಜಯಕುಮಾರ ಇದೆಯೋ ಅಥವಾ ಈಶ್ವರ ಖಂಡ್ರೆ ಇದೆಯೋ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ ಎಂದು ದೂರಿದ್ದಾರೆ.

ಅಜಯಕುಮಾರ ಹೆಸರಿನಿಂದ ಈಶ್ವರ ಎಂದು ಯಾವಾಗ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಲ್ಲಿಸಿಲ್ಲ ಎಂದು ಆಪಾದಿಸಿದ್ದಾರೆ.

ಕೃಷಿ ಜಮೀನು ಇಲ್ಲ ಎಂದು ನಮೂದಿಸಿದ ಪ್ರಮಾಣ ಪತ್ರದಲ್ಲೇ ಉದ್ಯೋಗದ ಕಾಲಂ ಎದುರು ಕೃಷಿಕ ಮತ್ತು ಆದಾಯ ಮೂಲ ಕೃಷಿ ಎಂದು ತೋರಿಸಿದ್ದಾರೆ. ಇದರಿಂದ ಅವರು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.

ಈಶ್ವರ ಖಂಡ್ರೆ ಅವರು ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ಅನೇಕ ಬ್ಯಾಂಕ್ ಖಾತೆಗಳ ವಿವರ 2013, 2018 ಮತ್ತು 2019 ರ ಚುನಾವಣೆಯಲ್ಲಿ ಯಾವುದೇ ಅಪ್‌ಡೇಟ್‌ ಮಾಡದೆ ಸಲ್ಲಿಸಿ ಸತ್ಯ ಮರೆಮಾಚುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಖಂಡ್ರೆ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ. ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅನರ್ಹಗೊಳಿಸಬೇಕು ಎನ್ನುವ ಕುರಿತ ದೂರಿನ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !