ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ಅಪಹೃತ ಮಗು ಬೀದರ್‌ನಲ್ಲಿ ಪತ್ತೆ

Last Updated 3 ಜುಲೈ 2018, 15:38 IST
ಅಕ್ಷರ ಗಾತ್ರ

ಬೀದರ್: ಹೈದರಾಬಾದ್‌ನ ಕೋಠಿ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸೋಮವಾರಅಪಹರಿಸಿದ್ದ ಆರು ದಿನದ ಮಗು ಮಂಗಳವಾರ ಇಲ್ಲಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ.

ವಿಜಯಾ ಸಭಾವತ್‌ ನಾರಿ ಜೂನ್ 27 ರಂದು ಕೋಠಿ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಲಸಿಕೆ ಹಾಕಿಸಲು ಸೋಮವಾರ ಮಗುವನ್ನು ಆಸ್ಪತ್ರೆಗೆ ತಂದಿದ್ದರು. ಈ ವೇಳೆ ದಾದಿಯ ಸೋಗಿನಲ್ಲಿ ಬಂದ ಮಹಿಳೆಯೊಬ್ಬಳು ಲಸಿಕೆ ಹಾಕಿಸುವ ನೆಪದಲ್ಲಿ ಮಗುವನ್ನು ಎತ್ತಿಕೊಂಡು ಹೋದಳು.

ಮಗುವನ್ನು ಒಯ್ದ ಮಹಿಳೆ ಒಂದು ಗಂಟೆಯಾದರೂ ಮರಳಿ ಬಾರದಿದ್ದಾಗ ವಿಜಯಾ ತನ್ನ ಗಂಡನಿಗೆ ವಿಷಯ ತಿಳಿಸಿದರು. ನಂತರ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರೂ ಮಹಿಳೆಯ ಸುಳಿವು ಸಿಗಲಿಲ್ಲ. ಹೀಗಾಗಿ ಮಗುವಿನ ತಂದೆ, ಸುಲ್ತಾನ್‌ ಬಜಾರ್ ಪೊಲೀಸರಿಗೆ ದೂರು ನೀಡಿದರು.

ಹೈದರಾಬಾದ್ ಪೊಲೀಸರು ಆಸ್ಪತ್ರೆ ಮತ್ತು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಮಹಿಳೆ ಮಗುವನ್ನು ಅಪಹರಿಸಿರುವುದು ದೃಢಪಟ್ಟಿದೆ. ಈ ಮಹಿಳೆ ವಿಜಯಾ ಅವರ ಕಣ್ಣು ತಪ್ಪಿಸಿ ಮಗುವಿನೊಂದಿಗೆ ಹೈದರಾಬಾದ್‌ನ ಮಹಾತ್ಮ ಗಾಂಧಿ ಬಸ್ ನಿಲ್ದಾಣದಿಂದ ಬಸ್ ಮೂಲಕ ಬೀದರ್‌ಗೆ ಬಂದಿದ್ದಾಳೆ.

‘ಮಹಿಳೆ, ಬೀದರ್‌ನ ನಯಾಕಮಾನ್‌ ಬಳಿ ಬಸ್‌ನಿಂದ ಇಳಿದಿದ್ದಾಳೆ. ಹೈದರಾಬಾದ್ ಹಾಗೂ ಬೀದರ್‌ ಪೊಲೀಸರು ಮೂರು ತಂಡಗಳಲ್ಲಿ ಬೀದರ್‌ನ ಮಾಂಗರವಾಡಿ, ಹಳ್ಳದಕೇರಿ, ಹಾರೂರಗೇರಿ ಹಾಗೂ ಮೈಲೂರು ಪ್ರದೇಶದಲ್ಲಿನ 500 ಮನೆಗಳ ತಪಾಸಣೆ ನಡೆಸಿದ್ದಾರೆ. ಈ ವಿಷಯ ತಿಳಿದು ಮಹಿಳೆ ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಬೆಂಚ್‌ ಮೇಲೆ ಮಗುವನ್ನು ಮಲಗಿಸಿ ಹೋಗಿದ್ದಾಳೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದರು.

‘ಮಗು ಅಳುವುದನ್ನು ಕಂಡ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಐಸಿಯುದಲ್ಲಿ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೈದರಾಬಾದ್‌ನಲ್ಲಿ ತಾಯಿಯೊಂದಿಗೆ ಇದ್ದ ಮಗುವಿನ ಚಿತ್ರವನ್ನು ಹೋಲಿಕೆ ಮಾಡಿ ನೋಡಿದಾಗ ಅದೇ ಮಗು ಎನ್ನುವುದು ಖಾತರಿಯಾಗಿದೆ’ ಎಂದು ಹೇಳಿದರು.

‘ಮಗುವಿನ ತಂದೆ ತಾಯಿಗೆ ಮಾಹಿತಿ ನೀಡಲಾಗಿದೆ. ತೆಲಂಗಾಣ ಪೊಲೀಸರೊಂದಿಗೆ ಮಹಿಳೆಯ ಶೋಧ ಕಾರ್ಯ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT