ಬುಧವಾರ, ಆಗಸ್ಟ್ 4, 2021
23 °C
ಹೋಮ್‌ ಕ್ವಾರಂಟೈನ್‌ನಲ್ಲಿ 92 ಪೊಲೀಸ್‌ ಸಿಬ್ಬಂದಿ

ಕೋವಿಡ್‌ ಸೋಂಕು: ಮೃತರ ಸಂಖ್ಯೆ 21ಕ್ಕೆ ಏರಿಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

 ಬೀದರ್: ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಕೋವಿಡ್‌ 19 ಸೋಂಕು ತಗುಲಿದೆ. ಒಬ್ಬ ಮಹಿಳೆ ಹಾಗೂ ಏಳು ಜನ ಪುರುಷರಿಗೆ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್‌ ವೈರಾಣು ಪೀಡಿತರ ಸಂಖ್ಯೆ 615ಕ್ಕೆ ತಲುಪಿದೆ.

ನೆರೆ ಜಿಲ್ಲೆಗಳಿಂದ ಬಂದ ವ್ಯಕ್ತಿಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡ ಕಾರಣ ಅನೇಕ ಪೊಲೀಸರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಹೀಗಾಗಿ ಪ್ರಸ್ತುತ 92 ಪೊಲೀಸರು ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಕೋವಿಡ್ 19 ಸೋಂಕಿನಿಂದಾಗಿ ಬೀದರ್‌ನ ನೂರ್‌ಖಾನ್ ತಾಲೀಮ್‌ನ ನಿವಾಸಿ ಠಾಣಾಕುಶನೂರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ 63 ವರ್ಷದ ನಿವೃತ್ತ ಪಿಎಸ್ಐ ಬುಧವಾರ ಬೆಳಗಿನ ಜಾವ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ. ತೆಲಂಗಾಣದಿಂದ ಮರಳಿದ್ದ ಬೀದರ್‌ ತಾಲ್ಲೂಕಿನ 80 ವರ್ಷದ ವ್ಯಕ್ತಿಗೆ ತೀವ್ರ ಜ್ವರ ಹಾಗೂ ಕಫದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇವರ ಗಂಟಲು ಮಾದರಿ ಪಡೆದು ಕೋವಿಡ್‌ ಪರೀಕ್ಷೆ ನಡೆಸಿದ್ದು, ವರದಿ ಪಾಸಿಟಿವ್‌ ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮದ ಪ್ರಕಾರ ನೆರವೇರಿಸಲಾಗಿದೆ.
ಜಿಲ್ಲಾ ಸಶಸ್ತ್ರ ಪಡೆಯ ಇನ್‌ಸ್ಪೆಕ್ಟರ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಬಂದಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌ ಅವರು ಮೂರು ದಿನಗಳಿಂದ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಬೀದರ್‌ ನಗರದ ಪೊಲೀಸ್‌ ಠಾಣೆಗಳ 59, ಭಾಲ್ಕಿ ತಾಲ್ಲೂಕಿನ 25 ಹಾಗೂ ಚಿಟಗುಪ್ಪದ 17 ಪೊಲೀಸರು ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ. ಬೀದರ್‌ ನಗರದಲ್ಲಿ ಝೀರಾ ಕನ್ವೆನ್ಶನ್‌ ಹಾಲ್, ಹೋಟೆಲ್‌ ಸಪ್ನಾ ಇಂಟರ್‌ನ್ಯಾಷನಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದರೆ, ಸೋಂಕು ತಗುಲಿದವರು ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್‌ ಠಾಣೆಗಳಲ್ಲಿ ಮೊದಲೇ ಪೊಲೀಸ್‌ ಸಿಬ್ಬಂದಿಯ ಸಂಖ್ಯೆ ಕಡಿಮೆ ಇದೆ. ನಗರದ ಗಾಂಧಿ ಗಂಜ್‌ ಪೊಲೀಸ್‌ ಠಾಣೆ ಹಾಗೂ ಮೆಹಕರ್ ಪೊಲೀಸ್‌ ಠಾಣೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಚಿಟಗುಪ್ಪ ಪೊಲೀಸ್‌ ಠಾಣೆಯ ಸಿಬ್ಬಂದಿ ಮೇಲೆ ನಿಗಾ ಇಡಲಾಗಿದೆ. ಇರುವ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ.

ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಕೆಲ ಸಿಬ್ಬಂದಿ ರಾಜ್ಯದ ಒಳಗೆ ಬರುತ್ತಿರುವ ಪ್ರವಾಸಿಗಳಿಂದ ಮಾಮೂಲು ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ವಿಶೇಷವಾಗಿ ತೆಲಂಗಾಣದ ಗಡಿಯಲ್ಲಿ ಮಾಮೂಲು ಪಡೆಯುವುದು ಹೆಚ್ಚಾಗಿದೆ. ಕೆಲವರು ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ ಗ್ರುಪ್‌ಗಳಿಗೂ ಹರಿಯ ಬಿಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲವರು ಮಾಮೂಲು ಪಡೆಯುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲವರ ಡ್ಯುಟಿ ಬದಲು ಮಾಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಕೋವಿಡ್ 19 ಸೋಂಕಿನಿಂದಾಗಿ 21 ಜನ ಮೃತಪಟ್ಟಿದ್ದಾರೆ. ಬ್ರಿಮ್ಸ್‌ ಆಸ್ಪತ್ರೆಯ ವಿಶೇಷ ಚಿಕಿತ್ಸಾ ಘಟಕದಲ್ಲಿ ಈವರೆಗೆ ಚಿಕಿತ್ಸೆ ಪಡೆದ 500 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 192 ಕಂಟೇನ್ಮೆಂಟ್‌ ಪ್ರದೇಶಗಳ ಪೈಕಿ 153 ಸಕ್ರಿಯವಾಗಿವೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು