ಗುರುವಾರ , ಸೆಪ್ಟೆಂಬರ್ 19, 2019
26 °C
ರಾಜಯೋಗ ಕೇಂದ್ರ ಪಾವನಧಾಮದಲ್ಲಿ ವಿವಿಧ ಕಾರ್ಯಕ್ರಮ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಗರ್ಬಾ ನೃತ್ಯದ ಮೆರುಗು

Published:
Updated:
Prajavani

ಬೀದರ್: ತೊಟ್ಟಿಲು, ಗರ್ಬಾ ನೃತ್ಯ, ಬೆಣ್ಣೆ ಗಡಿಗೆ ಒಡೆಯುವ ಕಾರ್ಯಕ್ರಮದೊಂದಿಗೆ ಇಲ್ಲಿಯ ಜನವಾಡ ರಸ್ತೆ ಸಮೀಪದ ಜಯಪ್ರಕಾಶ ನಾರಾಯಣ ಕಾಲೊನಿಯಲ್ಲಿ ಇರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ನಗರ ಹಾಗೂ ಸಮೀಪದ ಗ್ರಾಮಗಳ ತಾಯಂದಿರು ತಮ್ಮ ಮಕ್ಕಳಿಗೆ ಶ್ರೀಕೃಷ್ಣ, ರಾಧೆಯ ವೇಷ ತೊಡಿಸಿ ಕರೆ ತಂದಿದ್ದರು. ವಿಷ್ಣು ಹಾಗೂ ಲಕ್ಷ್ಮಿ ವೇಷಧಾರಿ ಮಕ್ಕಳು ಸಿಂಹಾಸನದ ಮೇಲೆ ಕುಳಿತು ಎಲ್ಲರ ಚಿತ್ತ ತಮ್ಮತ್ತ ಸೆಳೆದರು.

ಭಕ್ತಿ ಗೀತೆಗಳ ತಾಳಕ್ಕೆ ಮಕ್ಕಳು ಹೆಜ್ಜೆ ಹಾಕಿದರೆ, ತಾಯಂದಿರು ಹಾಗೂ ಬ್ರಹ್ಮಕುಮಾರಿ ಸಹೋದರಿಯರು ಗರ್ಬಾ ನೃತ್ಯ ಮಾಡಿದರು. ಪುಟಾಣಿಗಳು ಬೆಣ್ಣೆ ಗಡಿಗೆಯನ್ನು ಒಡೆದು ಸಂಭ್ರಮಿಸಿದರು.

ಕೇಂದ್ರದ ಪ್ರವರ್ತಕಿ ರೇಣುಕಾ ಬೆಹನ್ ಮಾತನಾಡಿ, ‘ಶ್ರೀಕೃಷ್ಣ ಅಂದಿನ ಕಾಲದಲ್ಲಿ ಬೆಣ್ಣೆ ತಿಂದಿದ್ದ ಪ್ರತೀತಿ ಇದೆ. ಈಗಿನ ಸಂಗಮ ಯುಗದಲ್ಲಿ ಅಧ್ಯಾತ್ಮ ಚಿಂತಕರು, ಜ್ಞಾನಿಗಳು ಹಾಗೂ ಪರಮಾತ್ಮನ ಸಂತಾನ ಎನಿಸಿಕೊಳ್ಳುವ ನಾವು ಜ್ಞಾನವೆಂಬ ಬೆಣ್ಣೆ ತಿಂದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ’ ಎಂದು ತಿಳಿಸಿದರು.

‘ತ್ರೆತಾಯುಗದಲ್ಲಿ ಯಶೋದೆ ತನ್ನ ಮಗ ಕೃಷ್ಣ ಮಣ್ಣು ತಿಂದನೆಂದು ಬಾಯಿ ತೆರೆಸಿದಾಗ ಆತನ ಬಾಯಲ್ಲಿ ಇಡೀ ಬ್ರಹ್ಮಾಂಡವನ್ನೇ ಕಂಡು ಆಶ್ಚರ್ಯಚಕಿತಳಾಗುತ್ತಾಳೆ. ಬರುವ ಸತಿಯುಗದಲ್ಲಿ ಪರಮಾತ್ಮ ನಮ್ಮ ಸನ್ನಡತೆ, ಸದಾಚಾರಕ್ಕೆ ಪ್ರತಿಫಲವಾಗಿ ನಮ್ಮನ್ನು ಜಗದೊಡೆಯರನ್ನಾಗಿ ಮಾಡುವನು. ಆದ್ದರಿಂದ ಆಧ್ಯಾತ್ಮ ಜೀವಿಗಳಾಗಲು, ಜ್ಞಾನ ಸಂಪನ್ನರಾಗಲು ಮುಂದೆ ಬರಬೇಕು’ ಎಂದು ಸಲಹೆ ಮಾಡಿದರು.

ಪ್ರವರ್ತಕಿ ಶಿಲ್ಪಾ ಬೆಹನ್ ಮಾತನಾಡಿ, ‘ಶ್ರೀಕೃಷ್ಣ ಗೋಪಿಕೆಯರೊಂದಿಗೆ ತುಂಟತನ ಪ್ರದರ್ಶಿಸಿದಂತೆ, ಈಗಿನ ಸಂಗಮ ಯುಗದಲ್ಲಿ ಆಧಾತ್ಮ ಜೀವಿಗಳನ್ನು ಮುರಳಿ ಮೂಲಕ ಜಾಗೃತಗೊಳಿಸುತ್ತಿದ್ದಾನೆ. ಆತನ ಸಂದೇಶ ಸಾರುವ ಭಗವದ್ಗೀತೆ ಮನುಕುಲಕ್ಕೆ ಮಾರ್ಗದರ್ಶಿಯಾಗಿದೆ’ ಎಂದು ತಿಳಿಸಿದರು.

ಮಂಗಲಾ ಬೆಹನ್ ಮಾತನಾಡಿ, ‘ಶ್ರೀಕೃಷ್ಣ ಸತ್ಯಯುಗದಲ್ಲಿ ಮೊದಲ ಯುವರಾಜನಾಗಿದ್ದ, ಆತನ ಆಸ್ಥಾನದಲ್ಲಿ ಸತ್ಯಮೇವ ಜಯತೆ ಮೂಲಮಂತ್ರವಾಗಿತ್ತು. ಇಂದಿನ ಆಡಳಿತದಲ್ಲೂ ಕೃಷ್ಣನ ನೀತಿಯನ್ನು ಅನುಸರಿಸಿದ್ದಲ್ಲಿ ಇಡೀ ವಿಶ್ವವೇ ಸ್ವರ್ಗವಾಗಲಿದೆ’ ಎಂದು ಹೇಳಿದರು.

ರೇಣು ಬೆಹನ್, ಉಮಾ ಬೆಹನ್, ಜಗದೀಶ, ಮಾರುತಿ, ಶಿವಮೂರ್ತಿ, ಸುನೀಲ್ ಇದ್ದರು.

Post Comments (+)