ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಕೃಷ್ಣ ಜನ್ಮಾಷ್ಟಮಿ ಆಚರಣೆ

ಕೃಷ್ಣ-ರಾಧೆ ವೇಷಧಾರಿಗಳಿಂದ ಶೋಭಾಯಾತ್ರೆ
Last Updated 19 ಆಗಸ್ಟ್ 2022, 14:23 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧೆಡೆ ಶುಕ್ರವಾರ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.


ಚಿಕ್ಕಪೇಟೆಯಲ್ಲಿರುವ ಇಸ್ಕಾನ್‌ ಮಂದಿರ, ಗುಂಪಾದ ಸಿದ್ಧಾರೂಢ ಮಠ, ಓಲ್ಡ್‌ಸಿಟಿಯ ಪಾಂಡುರಂಗ ಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲೋತ್ಸವ, ಕೀರ್ತನೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ಜನಸೇವಾ ಶಾಲೆಯಲ್ಲಿ ವಿಶಿಷ್ಟ ಆಚರಣೆ:

ಇಲ್ಲಿಯ ಮಾಧವನಗರದ ಜನಸೇವಾ ಶಿಶು ಮಂದಿರ ಹಾಗೂ ಪ್ರಾಥಮಿಕ ಶಾಲೆಯು ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಿತು.
ಕೃಷ್ಣ-ರಾಧೆ ವೇಷಧಾರಿಗಳ ಶೋಭಾಯಾತ್ರೆ, ಮೊಸರು ಗಡಿಗೆ ಒಡೆಯುವ, ಬೆಣ್ಣೆ ತಿನ್ನುವ ಸ್ಪರ್ಧೆ, ಕೃಷ್ಣನ ತೊಟ್ಟಿಲು, ಮಕ್ಕಳು, ಮಾತೆಯರ ಕೋಲಾಟ ಕೃಷ್ಣ ಜನ್ಮಾಷ್ಟಮಿಗೆ ಮೆರುಗು ತಂದುಕೊಟ್ಟವು.
ಶಾಲೆಯ ರಾಧಾ ಮತ್ತು ಕೃಷ್ಣ ವೇಷಧಾರಿ ಮಕ್ಕಳು ಭಗವಾನ ಕೃಷ್ಣ ಅವರಿಗೆ ಜಯಕಾರ ಹಾಕುತ್ತ ಶಾಲೆಯಿಂದ ಶೋಭಾಯಾತ್ರೆ ಆರಂಭಿಸಿ, ಮಾಧವನಗರ, ಪ್ರತಾಪನಗರದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಪುನಃ ಶಾಲೆಗೆ ಮರಳಿ ಸಮಾರೋಪಗೊಳಿಸಿದರು.
ಶಾಲೆಯಲ್ಲಿ ಮಾತೆಯರು ಕೃಷ್ಣ ಪಾತ್ರಧಾರಿ ಮಗುವಿನ ತೊಟ್ಟಿಲು ಇಟ್ಟರು. ಕೃಷ್ಣ ವೇಷಧಾರಿ ಮಕ್ಕಳಿಂದ ಮೊಸರು ಗಡಿಗೆ ಒಡೆಯುವ, ಬೆಣ್ಣೆ ತಿನ್ನುವ ಸ್ಪರ್ಧೆ ನಡೆಯಿತು. ಭಗದ್ಗೀತೆ, ಶ್ಲೋಕ ಪಠಣಗಳೂ ಜರುಗಿದವು.
ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಆಡಳಿತಾಧಿಕಾರಿ ಸೌಭಾವ್ಯವತಿ ಅವರು, ಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದು ಹೇಳಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಉಪನ್ಯಾಸಕಿ ಚೈತನ್ಯಾ ಧನರಾಜ ಉಪಸ್ಥಿತರಿದ್ದರು.
ಜನಸೇವಾ ಶಿಶು ಮಂದಿರದ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ನಿರೂಪಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು. ವಿದ್ಯಾರ್ಥಿಗಳು, ನೂರಾರು ಪಾಲಕರು ಪಾಲ್ಗೊಂಡಿದ್ದರು.


ಗಮನ ಸೆಳೆದ ಕೃಷ್ಣ-ರಾಧೆ ವೇಷಧಾರಿ ಮಕ್ಕಳು:

ನಗರದ ಗಂಗೋತ್ರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ ಹಾಗೂ ರಾಧೆ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.
ಕೃಷ್ಣ ಹಾಗೂ ರಾಧೆ ವೇಷ ಭೂಷಣ ಸ್ಪರ್ಧೆಯಲ್ಲಿ ಅತ್ಯಾಕರ್ಷಕ ವೇಷ ಧರಿಸಿದ್ದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಇದಕ್ಕೂ ಮುನ್ನ ಮಾತೆಯರು ಹಾಗೂ ಶಿಕ್ಷಕಿಯರು ಕೃಷ್ಣನ ತೊಟ್ಟಿಲು ನೆರವೇರಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಮಹತ್ವ ಇದೆ. ಭಗವಾನ ಕೃಷ್ಣ, ಸತ್ಯ, ನ್ಯಾಯ, ನೀತಿ, ಧರ್ಮದ ರಕ್ಷಕರಾಗಿದ್ದಾರೆ ಎಂದು ಮುಖ್ಯಶಿಕ್ಷಕಿ ಕಲಾವತಿ ಎಸ್. ಪರಶೆಟ್ಟೆ ನುಡಿದರು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

ರಾಂಪುರೆ ಶಾಲೆಯಲ್ಲಿ ಕೃಷ್ಣನಿಗೆ ಅಭಿಷೇಕ

ಬೀದರ್ ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಭಗವಾನರ ವಿಗ್ರಹಕ್ಕೆ ಶ್ರದ್ಧೆ, ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.
ಕೃಷ್ಣ-ರಾಧೆ ವೇಷಧಾರಿಗಳಿಂದ ಮೊಸರು ಗಡಿಗೆ ಒಡೆಯಲಾಯಿತು. ಮಕ್ಕಳಿಗೆ ಸಿಹಿ ಹಂಚಲಾಯಿತು. ಕೃಷ್ಣ- ರಾಧೆ ವೇಷಧಾರಿ ಮಕ್ಕಳು ಪ್ರದರ್ಶಿಸಿದ ನೃತ್ಯ ಎಲ್ಲರ ಗಮನ ಸೆಳೆಯಿತು.
ಶಾಲೆಯ ಅಧ್ಯಕ್ಷ ಮಹೇಶ ಎಸ್. ರಾಂಪುರೆ, ಶಿಕ್ಷಕಿಯರಾದ ಶೈಲಜಾ ಗುಪ್ತಾ, ಅಂಬಿಕಾ ರಾಂಪುರೆ, ನಿಕಿತಾ ಕುಂದನ್, ಮೀನಾಕ್ಷಿ ಪಾಟೀಲ, ಪ್ರಿಯಾಂಕಾ, ಸುನಿತಾ, ತ್ರಿವೇಣಿ, ಶ್ರುತಿ ಬರಗಾಲೆ, ಪ್ರಿಯಾ ರೆಡ್ಡಿ, ನಂದಿನಿ, ದಿನೇಶ ಸೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT