ಶನಿವಾರ, ಜನವರಿ 28, 2023
15 °C

ಮಾತೆ ಮಹಾದೇವಿ ವಿಚಾರ ಪ್ರಚಾರದ ಧ್ಯೇಯ: ಚನ್ನಬಸವಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಮಾತೆ ಮಹಾದೇವಿಯವರು ಜ್ಞಾನ ನೀಡಿದ್ದಾರೆ. ಬಸವ ತತ್ವವನ್ನು ನಾಡಿನಲ್ಲಿ ಹರಡಿ ವೈಚಾರಿಕತೆ ಬಿತ್ತಿದ್ದಾರೆ. ಅವರ ನಿಜ ವಾರಸುದಾರರು ನಾವಾಗಿದ್ದೇವೆ. ಅವರ ತತ್ವ, ಚಿಂತನೆಯ ಪ್ರಚಾರದ ಧ್ಯೇಯ ನಮ್ಮದಾಗಿದೆ’ ಎಂದು ಕೂಡಲ ಸಂಗಮ ಬಸವಧರ್ಮ ಟ್ರಸ್ಟ್‌ನಿಂದ ಉಚ್ಛಾಟಿತರಾದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ನಗರದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ.ಬೇಗ್ ಸಭಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ಕಲ್ಯಾಣ ಪರ್ವದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.

‘ಲಿಂಗಾನಂದ ಅಪ್ಪಗಳು ಹಾಗೂ ಮಾತೆ ಮಹಾದೇವಿಯವರು ಬಸವಣ್ಣ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕೂಡಲ ಸಂಗಮ ಮತ್ತು ಬಸವಕಲ್ಯಾಣದಲ್ಲಿ ಭವ್ಯ ಸ್ಮಾರಕ ನಿರ್ಮಿಸಿದ್ದಾರೆ. ನಾವೂ ಮೂರು ದಶಕಗಳಿಂದ ಅವರ ಜತೆಯಲ್ಲಿದ್ದು ಇದಕ್ಕಾಗಿ ಶ್ರಮಿಸಿದ್ದೇವೆ. ಅವರ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಆದರೆ ಕೆಲವರು ಅವರು ಸಂಪಾದಿಸಿದ ಆಸ್ತಿಯ ಹಿಂದೆ ಬಿದ್ದಿದ್ದಾರೆ. ನಮ್ಮಂಥವರನ್ನು ಕಡೆಗಣಿಸುತ್ತಿದ್ದಾರೆ. ನಾವು ನಡೆಸುತ್ತಿರುವ ಈ ಕಾರ್ಯಕ್ರಮ ಸ್ವಾಭಿಮಾನಿಗಳ ಕಲ್ಯಾಣ ಪರ್ವ. ಲಿಂಗದೇವ ಎಂಬುದು ಮಾತಾಜಿಯವರು ಸಂಶೋಧಿಸಿದ ವಚನಾಂಕಿತವಾಗಿದೆ. ಅದನ್ನೇ ನಾವು ಮುಂದುವರಿಸುತ್ತೇವೆ’ ಎಂದರು.

ಬೆಳಗಾವಿ ಜಿಲ್ಲಾ ರಾಷ್ಟ್ರೀಯ ಬಸವದಳದ ಗೌರವ ಅಧ್ಯಕ್ಷ ಕೆ.ಬಸವರಾಜ ಮಾತನಾಡಿ,‘ಬಸವಧರ್ಮ ಪೀಠದ ಮೇಲೆ ಕುಳಿತ ಇಂದಿನ ಪೀಠಾಧ್ಯಕ್ಷರು ನಿಷ್ಠಾವಂತ ಶರಣರನ್ನೇ ಮರೆಯುತ್ತಿರುವುದು ದುರಂತದ ಸಂಗತಿ. ಗುರುಗಳಿಂದಲೇ ಭೇದಭಾವ ನಡೆದರೆ ಐಕ್ಯತೆ ಇರುವುದೆಲ್ಲಿ’ ಎಂದು ಪ್ರಶ್ನಿಸಿದರು.

ಸಾಹಿತಿ ಸಚ್ಚಿದಾನಂದ ಚಟ್ನಳ್ಳಿ ಮಾತನಾಡಿ,‘ಮಾತೆ ಮಹಾದೇವಿ ಅವರಿಲ್ಲದೆ ಬಸವಧರ್ಮ ಪೀಠ ನಾವಿಕನಿಲ್ಲದ ನೌಕೆಯಂತಾಗಿದೆ’ ಎಂದರು.

ವೀರೇಶ ಗಂಗಾವತಿ, ಶರಣಪ್ರಕಾಶ ಹಾಗೂ ಸಿದ್ಧವೀರ ಸಂಗಮದ ಮಾತನಾಡಿದರು.

ಗುಣತೀರ್ಥ ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಲಿಂಗಾಯತಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಮಾತೆ ಸತ್ಯಾದೇವಿ, ಮಾತೆ ಶಾಂತಾದೇವಿ, ಬಸವಜ್ಯೋತಿ, ಎಸ್.ದಿವಾಕರ್, ಸುರೇಶ ಪಾಟೀಲ, ಇಂದುಮತಿ ದಿವಾಕರ್, ಬಾಣೂರು ಹಿರಣ್ಣಯ್ಯ, ಸಂಜಯ ಪಾಟೀಲ ಇದ್ದರು.

ಸಚ್ಚಿದಾನಂದ ಚಟ್ನಳ್ಳಿ ಬರೆದ ‘ಅನುಭಾವ ತರಂಗ’ ಪುಸ್ತಕ ಬಿಡುಗಡೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು