ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 19 ಮೇ 2022, 3:09 IST
ಅಕ್ಷರ ಗಾತ್ರ

ಪೈಪ್‌ಲೈನ್‌ ಸರಿಪಡಿಸಿ

ಚಿಟಗುಪ್ಪ: ವಾರ್ಡ್‌ ಸಂಖ್ಯೆ 4ರಲ್ಲಿ ಪುರಸಭೆಯ ಕುಡಿಯುವ ನೀರಿನ ನಲ್ಲಿ ಪೈಪ್‌ಲೈನ್‌ ಒಡೆದು ಒಂದು ವರ್ಷ ಆಗಿದೆ. ಇದರಿಂದ ಪ್ರತಿದಿನ ನೀರು ಪೋಲಾಗುತ್ತಿದೆ. ಆ ನೀರು ರಸ್ತೆ ಮೇಲೆ ನಿಂತಿದೆ. ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ನಾಗರಿಕರು ರಸ್ತೆ ಮೇಲೆ ಸಂಚರಿಸಲು ಕಷ್ಟವಾಗುತ್ತಿದೆ. ತಕ್ಷಣ ಅಧಿಕಾರಿಗಳು ಗಮನಹರಿಸಿ ಪೈಪ್‌ಲೈನ್‌ ಸರಿಪಡಿಸಿ ಅನುಕೂಲ ಮಾಡಿಕೊಡಬೇಕು.

ರೇವಣಪ್ಪ ಹುಗಾರ್‌, ಚಿಟಗುಪ್ಪ ನಿವಾಸಿ

ಚರಂಡಿ ನಿರ್ಮಿಸಿ

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಮದ ಎಲ್ಲ ಓಣಿಗಳಲ್ಲಿ ಚರಂಡಿ ನಿರ್ಮಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಪ್ರಕಾಶ್ ಬಾವಗಿ, ಗ್ರಾಮಸ್ಥ

ಉದ್ಯಾನ ಅಭಿವೃದ್ಧಿಪಡಿಸಿ

ಬೀದರ್‌: ನಗರದ ಜನವಾಡ ಮಾರ್ಗದಲ್ಲಿ ವೈದ್ಯಕೀಯ ಕಾಲೇಜಿನ ಪಕ್ಕದ ಬಸವೇಶ್ವರ ಕಾಲೊನಿಯ ಉದ್ಯಾನ ಸಂಪೂರ್ಣ ಹಾಳಾಗಿದೆ. ಇದರ ಸುತ್ತ ಖಾಸಗಿ ಆಸ್ಪತ್ರೆಗಳು ಹಾಗೂ ಮನೆಗಳು ಇವೆ. ಉದ್ಯಾನದ ಬಾಗಿಲು ಮುರಿದಿದೆ.

ಉದ್ಯಾನದಲ್ಲಿ ಹುಲ್ಲು ಬೆಳೆದು ದನಗಳು ಮೇಯುತ್ತಿವೆ. ಹಂದಿಗಳು ವಾಸವಾಗಿವೆ. ವಾಕಿಂಗ್ ಟ್ರ್ಯಾಕ್ ಹಾಗೂ ಸಿಮೆಂಟ್‌ ಆಸನಗಳು ಮುರಿದು ಬಿದ್ದಿವೆ. ಉದ್ಯಾನದಲ್ಲಿ ಹಾವು ತಿರುಗುತ್ತಿವೆ. ನಗರಸಭೆ ಅಧಿಕಾರಿಗಳು ನಿರ್ವಹಣೆ ಮಾಡಿ ಕಾರಣ ಉದ್ಯಾನ ಪಾಳು ಬಿದ್ದಿದೆ. ಸಾರ್ವಜನಿಕರಿಗೂ ಯಾವುದೇ ಉಪಯೋಗ ಆಗುತ್ತಿಲ್ಲ.

ಸಾರ್ವಜನಿಕರ ಹಿತದೃಷ್ಟಿಯಿಂದ ಉದ್ಯಾನ ಅಭಿವೃದ್ಧಿ ಪಡಿಸಬೇಕು. ಮಳೆಗಾಲ ಆರಂಭವಾಗಲಿರುವ ಕಾರಣ ಅಲ್ಲಿ ಅಲಂಕಾರಿಕ ಸಸ್ಯ ಹಾಗೂ ಹೂವಿನ ಗಿಡಗಳನ್ನು ಬೆಳೆದು ಉದ್ಯಾನದ ಅಂದ ಹೆಚ್ಚಿಸಬೇಕು.

ವೀರಭದ್ರಪ್ಪ ಉಪ್ಪಿನ್, ನಿವೃತ್ತ ಅಧಿಕಾರಿ

ಕೊಳಚೆ ತೆರವು ಮಾಡಿ

ಖಟಕಚಿಂಚೋಳಿ: ಸಮೀಪದ ಮಾಸಿಮಾಡ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಸಮೀಪದ ನೀರು ಸಂಗ್ರಹ ತೊಟ್ಟಿಯಿಂದ ನಿರಂತರವಾಗಿ ನೀರು ಬೀಳುತ್ತಿರುವ ಕಾರಣ ತೊಟ್ಟಿ ಸುತ್ತಲೂ ಹೊಲಸು ಸಂಗ್ರಹವಾಗಿದೆ.

ದುರ್ನಾತ ಹಾಗೂ ಸೊಳ್ಳೆಗಳ ಕಾಟ ಹೆಚ್ಚಿದೆ. ಅಲ್ಲದೆ, ನೀರು ಕುಡಿಯಲೂ ಯೋಗ್ಯವಲ್ಲದಂತಾಗಿದೆ. ಆದ್ದರಿಂದ ತಕ್ಷಣ ಪಂಚಾಯಿತಿ ಸಿಬ್ಬಂದಿ ಈ ಕಡೆ ಗಮನ ಹರಿಸಿ ನೀರು ಸಂಗ್ರಹ ತೊಟ್ಟಿ ಸುತ್ತಲೂ ಸಂಗ್ರಹಗೊಂಡ ಕೊಳಚೆ ತೆರವು ಮಾಡಬೇಕು.

ನೀಲಕಂಠ ಪರೀಟ್, ಗ್ರಾಮಸ್ಥ

ಸೇತುವೆ ದುರಸ್ತಿ ಮಾಡಿ

ಬಸವಕಲ್ಯಾಣ: ತಾಲ್ಲೂಕಿನ ಗೌರ ಗ್ರಾಮದ ಬಳಿ ಇರುವ ಸೇತುವೆಯ ತಡೆಗೋಡೆ ಕುಸಿದಿದೆ. ಶೀಘ್ರದಲ್ಲಿಯೇ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಬಸವಕಲ್ಯಾಣದಿಂದ ಹುಲಸೂರ ಹಾಗೂ ಮಹಾರಾಷ್ಟ್ರದ ನಗರಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ಆದರೆ, ಇಲ್ಲಿನ ಸೇತುವೆಯ ತಡೆಗೋಡೆ ಕುಸಿದು ಅನೇಕ ತಿಂಗಳುಗಳಾಗಿವೆ. ಕಾರಣ ಎದುರಿನಿಂದ ವಾಹನಗಳು ಬಂದಾಗ ಅಪಾಯ ಸಂಭವಿಸುವ ಸಾಧ್ಯತೆ ಇದೆ. ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳು ಉರುಳಿ ಬೀಳುತ್ತಿವೆ.

ಸೇತುವೆಗೆ ಎರಡು ಕಡೆಯೂ ತಡೆಗೋಡೆ ಇಲ್ಲದ ಕಾರಣ ತೊಂದರೆ ಆಗುತ್ತಿದೆ. ಆದ್ದರಿಂದ ಇನ್ನು ಮುಂದಾದರೂ ಸಂಬಂಧಿತರು ತಡೆಗೋಡೆ ನಿರ್ಮಿಸಬೇಕು. ಇಲ್ಲಿನ ಸೇತುವೆಗೂ ಅಪಾಯ ಸಂಭವಿಸಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು.
ಶಿವರಾಜಪ್ಪ ಔರಾದೆ, ನಿವಾಸಿ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ

ಔರಾದ್: ತಾಲ್ಲೂಕಿನ ಬೆಳಕುಣಿ (ಚೌ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸುಮಾರು 2 ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಎರಡು ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತದೆ. ಅದರೆ ಅದರಲ್ಲಿ ಒಂದು ಕೊಳವೆಬಾವಿಯಲ್ಲಿ ನೀರು ಬತ್ತಿದೆ. ಹೀಗಾಗಿ ಈಗ ಇಡೀ ಊರಿಗೆ ಒಂದೇ ಕೊಳವೆಬಾವಿ ಇದೆ. ಒಂದು ಕೊಡ ನೀರಿಗಾಗಿ ಜನ ಅಹೋ ರಾತ್ರಿ ಸರದಿಯಲ್ಲಿ ನಿಲ್ಲಬೇಕಾಗಿದೆ. ಈ ಕುರಿತು ಪಿಡಿಒ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಂಡು ಜನರಿಗೆ ಕುಡಿಯಲು ನೀರು ಪೂರೈಸಿ.
ಅರವಿಂದ ಮಲ್ಲಿಗೆ, ಉಪಾಧ್ಯಕ್ಷ, ಮಾದಿಗ ದಂಡೋರ ಹೋರಾಟ ಸಮಿತಿ ಯುವ ಘಟಕ ಔರಾದ್

ತಂತಿ ಸರಿಪಡಿಸಿ

ಹುಲಸೂರ: ಪಟ್ಟಣದ ಬಸವೇಶ್ವರ ಕಾಲೊನಿಯಲ್ಲಿ ವಿದ್ಯುತ್ ಕಂಬಗಳ ತಂತಿ ಜೋತು ಬಿದ್ದಿದೆ. ನೆಲ ಹಾಗೂ ತಂತಿಗೆ ಕೇವಲ ಐದು ಅಡಿ ಇದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ, ಬಿರುಗಾಳಿ ಬೀಸಿದಾಗ ತಂತಿಗಳು ಪರಸ್ಪರ ತಾಗಿ ಕಿಡಿ ಹಾರುತ್ತಿರುತ್ತದೆ.

ಈ ಕುರಿತು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಾಲಾದರೂ ಅಧಿಕಾರಿಗಳು ಎಚ್ಚೆತ್ತು ತಂತಿಯನ್ನು ಸರಿಪಡಿಸಬೇಕು.

ದೇವಿಂದ್ರ ವಿ. ಭೊಪಳೆ, ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT