ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಗಳಲ್ಲಿ ಸೌಕರ್ಯ ಕೊರತೆ; ಕೊನೆಗಾಣದ ಸಮಸ್ಯೆ

ಮೃತರ ಅಂತ್ಯಕ್ರಿಯೆ ಮಾಡಲು ಇಲ್ಲ ಸಮರ್ಪಕ ವ್ಯವಸ್ಥೆ; ಜನರ ಮನವಿಗೆ ಸಿಗದ ಸ್ಪಂದನೆ
Last Updated 7 ಜೂನ್ 2021, 2:35 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ 250 ಸ್ಮಶಾನಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಹೊರವಲಯ ಮತ್ತು ಗೋಮಾಳಕ್ಕೆ ಹೊಂದಿಕೊಂಡು ಸ್ಮಶಾನಗಳಿವೆ. ತಮ್ಮ ಸಂಬಂಧಿಕರು ಮೃತಪಟ್ಟಾಗ ಕೆಲವರು ತಮ್ಮ ಹೊಲದಲ್ಲೇ ಅಂತ್ಯಕ್ರಿಯೆ ಮಾಡುವ ಪರಿಪಾಠ ಇದೆ. ಆದರೆ, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಇರುವ ಅನೇಕ ಸ್ಮಶಾನಗಳಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಧರ್ಮ ಹಾಗೂ ಜಾತಿ ಸಮುದಾಯದವರಿಗೆಂದೇ ಪ್ರತ್ಯೇಕ ಸ್ಮಶಾನಗಳಿವೆ. ಪರಿಶಿಷ್ಟರ 89, ಮುಸ್ಲಿಮರ 53 ಹಾಗೂ ಇತರೆ ಸಮುದಾಯಗಳ 108 ಸ್ಮಶಾನಗಳಿವೆ. ಇದರಲ್ಲಿ ಒಂದು ಸ್ಮಶಾನವೂ ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕಾರಣ ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಅಂತ್ಯಕ್ರಿಯೆಗೆ ಬರುವ ವ್ಯಕ್ತಿಗಳಿಗೆ ಕೂರಲು ಚಿಕ್ಕ ಶೆಡ್‌ ಸಹ ನಿರ್ಮಿಸಿಲ್ಲ. ಮಳೆಗಾಲದಲ್ಲಂತೂ ಈ ಸಮಸ್ಯೆ ಇನ್ನೂ ಹೆಚ್ಚಿರುತ್ತದೆ.

ಜಿಲ್ಲೆಯಲ್ಲಿ ಕೆಲ ಕಡೆ ಶವಗಳನ್ನು ಹೂಳುವ ಮತ್ತು ದಹಿಸುವ ಪದ್ಧತಿ ಇದೆ. ಶವ ಹೂಳುವವರಿಗೆ ಕೆಲ ಕಡೆ ಬಂಡೆಗಲ್ಲು, ಕೆಂಪುಕಲ್ಲು ಇರುವ ಪ್ರದೇಶವನ್ನು ಸ್ಮಶಾನಕ್ಕೆ ಕೊಡಲಾಗಿದೆ. ಶವ ದಹಿಸುವ ಪ್ರದೇಶದಲ್ಲಿ ಶೆಡ್‌ ನಿರ್ಮಿಸಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ.

ಬೀದರ್‌ ನಗರದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ಸ್ಮಶಾನ ಹೊರತುಪಡಿಸಿ ನಾಲ್ಕು ಸಾರ್ವಜನಿಕ ಸ್ಮಶಾನಗಳಿವೆ. ನೌಬಾದ್‌ ಸಮೀಪದ ಮಾಧವನಗರದಲ್ಲಿರುವ ಸ್ಮಶಾನದಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಸ್ಮಶಾನ ಇರುವ ಕಾರಣ ಶವ ಹೊತ್ತು ತರುವುದೇಕಷ್ಟ.

ಮಾಧವನಗರದಲ್ಲಿ ಒಂದು ಬದಿಗೆ ಕ್ರೈಸ್ತರ ಸ್ಮಶಾನ, ಇನ್ನೊಂದು ಬದಿಗೆ ಹಿಂದೂಗಳ ಸ್ಮಶಾನ ಇದೆ. ಹಿಂದೂಗಳ ಸ್ಮಶಾನದಲ್ಲಿ ಲಿಂಗಾಯತರು, ಕುರುಬರು, ಕಬ್ಬಲಿಗರು, ರಜಪೂತರು ಹಾಗೂ ದಲಿತರು ತಮ್ಮ ಸಮುದಾಯದ ವ್ಯಕ್ತಿ ಸಾವಿಗೀಡಾದರೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಸ್ಮಶಾನಕ್ಕೆ ಹೋಗಲು ಅಚ್ಚುಕಟ್ಟಾದ ದಾರಿ ಇಲ್ಲ.

ಮಾಧವನಗರದ ಅಂಚಿನಲ್ಲಿ ನಗರಸಭೆಯವರು ಗಟಾರು ನಿರ್ಮಿಸಿ ಸ್ಮಶಾನಕ್ಕೆ ಹೋಗುವ ರಸ್ತೆ ಮೇಲೆ ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಇದರಿಂದ ಕಚ್ಚಾ ರಸ್ತೆಯೂ ಹಾಳಾಗಿದೆ. ರಸ್ತೆ ಬದಿಗೆ ಗಿಡಗಂಟಿಗಳು ಬೆಳೆದಿವೆ.

ವಾಹನದಲ್ಲಿ ಶವ ತಂದರೂ ಸ್ಮಶಾನದವರೆಗೂ ಹೋಗಲು ದಾರಿ ಇಲ್ಲ. ಕಾರಣ ಅರ್ಧ ಕಿ.ಮೀ. ದೂರದ ದುರ್ಗಮ ಕಾಲು ದಾರಿಯಲ್ಲಿ ಪ್ರಯಾಸಪಟ್ಟು ಸ್ಮಶಾನಕ್ಕೆ ಹೋಗಬೇಕಾದ ಸ್ಥಿತಿ ಇದೆ.

‘ಸ್ಮಶಾನಕ್ಕೆ ತೆರಳುವ ಮಾರ್ಗ ಜೆಸಿಬಿಯಿಂದ ಸಮತಟ್ಟುಗೊಳಿಸಬೇಕು. ರಸ್ತೆ ಬದಿಗೆ ಗಟಾರು ನಿರ್ಮಿಸಿ ನೀರು ಗಟಾರಿನಲ್ಲೇ ಹರಿದು ಹೋಗುವಂತೆ ಮಾಡಬೇಕು. ಸ್ಮಶಾನದಲ್ಲಿ ಚಿಕ್ ಕೊಠಡಿ ನಿರ್ಮಿಸಿ ಶವ ಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆ, ಸೀಮೆ ಎಣ್ಣೆ ಹಾಗೂ ದಪ್ಪ ಉಪ್ಪು ಸಿಗುವಂತೆ ಮಾಡಬೇಕು’ ಎನ್ನುತ್ತಾರೆ ನೌಬಾದ್‌ನ ನಿವಾಸಿ ಶ್ರೀಕಾಂತ ಟಿ.

‘ನಗರದ ಭೂಮರೆಡ್ಡಿ ಕಾಲೇಜು ಸಮೀಪದ ಸ್ಮಶಾನದಲ್ಲೂ ಮೂಲಸೌಕರ್ಯ ಇಲ್ಲ. ಗಟ್ಟಿ ನೆಲ ಇರುವ ಕಾರಣ ಶವ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಶವ ಸಂಸ್ಕಾರಕ್ಕೆ ಬೇರೆ ಕಡೆಗೆ ಜಾಗ ಕಲ್ಪಿಸಬೇಕು. ಇಲ್ಲವೆ, ಅಲ್ಲಿ ನಗರಸಭೆಯಿಂದಲೇ ಒಂದು ಜೆಸಿಬಿ ವ್ಯವಸ್ಥೆ ಮಾಡಬೇಕು. ಶವಸಂಸ್ಕಾರ ಮಾಡಿ ಬಂದ ನಂತರ ಕೈಕಾಲು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಗುಂಪಾದ ನಿವಾಸಿಗಳು ಒತ್ತಾಯಿಸುತ್ತಾರೆ.

‘ನರಸಿಂಹ ಝರಣಾರಸ್ತೆಯಲ್ಲಿರುವ ಸ್ಮಶಾನದಲ್ಲೂ ಮೂಲಸೌಕರ್ಯಗಳ ಕೊರತೆ ಇದೆ. ಇದೇ ಸ್ಮಶಾನದಲ್ಲೇ ಅತಿ ಹೆಚ್ಚು ಶವಗಳನ್ನು ದಹಿಸಲಾಗುತ್ತದೆ. ಅದನ್ನು ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು’ ಎಂದು ಶ್ರೀನಿವಾಸ ಉದಗಿರೆ ಮನವಿ ಮಾಡುತ್ತಾರೆ.

ಮನವಿಗೆ ಸಿಗದ ಸ್ಪಂದನೆ
ಭಾಲ್ಕಿಯ ಮಾಸುಮ್‌ ಪಾಶಾ ಕಾಲೊನಿ, ಆನಂದವಾಡಿ ರಸ್ತೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಮೂಲಸೌಕರ್ಯ ಇರದ ಕಾರಣ ಅಂತ್ಯಕ್ರಿಯೆಗೆ ಬರುವ ಜನರು ಸಂಕಷ್ಟ ಎದುರಿಸುತ್ತಾರೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳು, ಕುಡಿಯಲು ನೀರು, ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಮೂಲಸೌಕರ್ಯ ಒದಗಿಸುವಂತೆ ಅನೇಕ ಬಾರಿ ಪುರಸಭೆ, ತಹಶೀಲ್ದಾರ್‌ ಕಚೇರಿಯ ಪ್ರಮುಖ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಸಂಭಾಜಿ ಬ್ರಿಗೇಡ್‌ನ ಸತೀಶಕುಮಾರ ಸೂರ್ಯವಂಶಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸ್ಮಶಾನ ಭೂಮಿ ಇಲ್ಲದೇ ಪರದಾಟ
‘ಖಟಕಚಿಂಚೋಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಸ್ವಂತ ಜಮೀನು ಇರುವವರ ಸಂಬಂಧಿಕರು ಮೃತಪಟ್ಟಾಗ ತಮ್ಮ ಹೊಲದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಸ್ವಂತ ಜಮೀನು ಇಲ್ಲದವರು ಸರ್ಕಾರಿ ಖುಲ್ಲಾ ಜಾಗ, ಕೆರೆ, ಹಳ್ಳಗಳ ಬದಿಯಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ’ ಎಂದು ನಾವದಗಿಯ ನಾಗನಾಥ ಬಿರಾದಾರ ಹೇಳುತ್ತಾರೆ.

ಸೌಲಭ್ಯ ವಂಚಿತ ರುದ್ರಭೂಮಿಗಳು
ಚಿಟಗುಪ್ಪ ಪಟ್ಟಣದ ಮಡಿವಾಳೇಶ್ವರ ಗವಿ ಪಕ್ಕದಲ್ಲಿಯ ವೀರಶೈವ, ಹಡಪದ, ಹೂಗಾರ, ವಡೆಯರ, ಸಾಳಿ ಇತರ ಸಮಾಜದವರ ರುದ್ರಭೂಮಿಗಳು ಹಲವು ವರ್ಷಗಳಿಂದ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ರುದ್ರಭೂಮಿಯಲ್ಲಿ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಇಲ್ಲ, ರುದ್ರಭೂಮಿಯೆಲ್ಲೆಡೆ ಮುಳ್ಳು ಕಂಟಿ ಬೆಳೆದಿರುವುದರಿಂದ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಹುಡಗಿ ಮಾರ್ಗದಲ್ಲಿರುವ ಮಹಾದೇವ ಮಂದಿರ ಸಮೀಪದ ಬ್ರಾಹ್ಮಣ, ಕೋಮಟಿ ಸಮುದಾಯದ ಸ್ಮಶಾನ ಸಂಪೂರ್ಣ ಹಾಳಾಗಿದೆ. ಮುತ್ತಂಗಿ, ನಿರ್ಣಾ, ಮನ್ನಾಎಖ್ಖೆಳ್ಳಿ, ತಾಳಮಡಗಿ, ಮಂಗಲಗಿ ಗ್ರಾಮದಲ್ಲೂ ಸ್ಮಶಾನದಲ್ಲಿ ಸೌಕರ್ಯದ ಕೊರತೆಇದೆ.

ಕಮಲನಗರದಲ್ಲಿ ಅಂತ್ಯಕ್ರಿಯೆ ಕಷ್ಟ
ಕಮಲನಗರದಲ್ಲಿ ಎಂಟು ವರ್ಷಗಳ ಹಿಂದೆಯೇ ಸ್ಮಶಾನಭೂಮಿ ಮಂಜೂರು ಮಾಡಲಾಗಿದೆ. ಆದರೆ, ಈವರೆಗೂ ಮೂಲಸೌಕರ್ಯ ಕಲ್ಪಿಸಿಲ್ಲ. ಗಟ್ಟಿ ನೆಲ ಇರುವ ಕಾರಣ ಶವ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ.

‘ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿದ್ದೇವೆ. ಅಧಿಕಾರಿಗಳು ಕೆಲಸ ಮಾಡದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರಿಗೂ ಮನವಿಪತ್ರ ಸಲ್ಲಿಸಲಾಗಿದೆ. ಈವರೆಗೂ ಸ್ಮಶಾನ ಅಭಿವೃದ್ಧಿ ಕಾರ್ಯ ಆರಂಭವಾಗದಿರುವುದು ಬೇಸರ ಉಂಟು ಮಾಡಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಲಾಜಿ ತೆಲಂಗ್.

ಹುಮನಾಬಾದ್ ಹೊರವಲಯದ ರಾಷ್ಟೀಯ ಹೆದ್ದಾರಿ– 65 ಪಕ್ಕದಲ್ಲಿ ಸ್ಮಶಾನಕ್ಕೆ ಸುತ್ತು ಗೋಡೆ ನಿರ್ಮಿಸಿಲ್ಲ.ಸ್ಮಶಾನದಲ್ಲಿ ಗಿಡ ಗಂಟಿಗಳು ಬೆಳೆದಿವೆ. ಮಳೆಗಾಲದಲ್ಲಿ ಹೊಲಸು ನೀರು ಸಂಗ್ರಹವಾಗುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರಬೇಕಾಗುತ್ತದೆ. ತಾಲ್ಲೂಕಿನ ಘೋಡವಾಡಿ ಗ್ರಾಮದ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹಂದಿಕೇರಾ ಗ್ರಾಮದ ಸ್ಮಶಾನದಲ್ಲಿ ಮೂಲಸೌಕರ್ಯದ ಕೊರತೆ ಇದೆ.

ಔರಾದ್: ಅಂತ್ಯಕ್ರಿಯೆಗೂ ಪರದಾಟ
ಔರಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಮೃತರ ಅಂತ್ಯಕ್ರಿಯೆಗಾಗಿ ಪರದಾಡಬೇಕಿದೆ. ಕೆಲ ಕಡೆ ಖಾಸಗಿ ಜಮೀನು ಮಾಲೀಕರು ಶವ ಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಶವ ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿವೆ.

ಔರಾದ್ ಪಟ್ಟಣದ ಜನರಂತೂ ಶವ ಸಂಸ್ಕಾರ ಮಾಡಲು ತೊಂದರೆ ಎದುರಿಸುತ್ತಿದ್ದಾರೆ. ಅಮರೇಶ್ವರ ದೇವಸ್ಥಾನ ಬಳಿ ಇರುವ ಸ್ಮಶಾನ ಭೂಮಿ ಅತಿಕ್ರಮಣವಾಗಿ ಈಗ ಅಲ್ಲಿ ಅರ್ಧ ಎಕರೆ ಜಮೀನು ಇದೆ‌. ಮುಸ್ಲಿಂ ‌ಸಮುದಾಯ ಹೊರತುಪಡಿಸಿ ಪಟ್ಟಣದ ಎಲ್ಲ ಸಮುದಾಯ ಜನ ಇದೇ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಇಲ್ಲಿ ಅಗತ್ಯ ಮೂಲ ಸೌಲಭ್ಯದ ಕೊರತೆ ಇದೆ. ಮಳೆಗಾಲದಲ್ಲಿ ಕೆಸರು ತುಂಬಿಕೊಂಡು ನಡೆದು ಹೋಗಲು ಸಾಧ್ಯ ಆಗುವುಗಿಲ್ಲ. ಊರು ಹೊರಗೆ ಅಂತ್ಯಕ್ರಿಯೆಗೆ ಜಮೀನು ಒದಗಿಸಲು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಔರಾದ್ ಲಿಂಗಾಯತ ಸಮಾಜದ ಅಧ್ಯಕ್ಷ ವೀರೇಶ ಅಲ್ಮಾಜೆ ಹೇಳುತ್ತಾರೆ.

ಬಸವಕಲ್ಯಾಣ ಸ್ಮಶಾನದಲ್ಲಿ ಉತ್ತಮ ವ್ಯವಸ್ಥೆ
ಬಸವಕಲ್ಯಾಣ ನಗರದಲ್ಲಿ ಖಾನಾಪುರ ರಸ್ತೆಯಲ್ಲಿನ ಹಿಂದೂ ಸ್ಮಶಾನ ಭೂಮಿ ಉತ್ತಮ ಸ್ಥಿತಿಯಲ್ಲಿದೆ.

ಎತ್ತರದ ಆವರಣಗೋಡೆಯಿದ್ದು, ಪ್ರವೇಶದ್ವಾರಕ್ಕೆ ಕಬ್ಬಿಣದ ಸಲಾಕೆಗಳ ಗೇಟ್ ಇದೆ. ಮೃತದೇಹಗಳ ದಹನಕ್ಕೆ ಎರಡು ಚಿತಾಗಾರಗಳಿವೆ. ಒಳ ಆವರಣದಲ್ಲಿ ಸಸಿ ಬೆಳೆಸಿ ಪರಿಸರ ಹಸಿರುಗೊಳಿಸಲಾಗಿದೆ.

ಗೇಟ್ ಹತ್ತಿರ ನೀರಿನ ವ್ಯವಸ್ಥೆಯೂ ಇದೆ. ಮೃತದೇಹಗಳ ಸಾಗಾಣೆಗೆ ತಳ್ಳುಗಾಡಿ, ಕುರ್ಚಿ ವ್ಯವಸ್ಥೆ ಇದೆ. ಆದರೆ, ನಾರಾಯಣಪುರ ರಸ್ತೆಯಲ್ಲಿನ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ಮುಳ್ಳು ಕಂಟೆಗಳು ಬೆಳೆದಿವೆ. ವಿಶಾಲ ಜಾಗವಿದ್ದರೂ ಒಳಗೆ ತಿರುಗಾಟಕ್ಕಾಗಿ ಸಿಸಿ ರಸ್ತೆ‌ ಇಲ್ಲ. ಆವರಣಗೋಡೆ ಉತ್ರಮ ಸ್ಥಿತಿಯಲ್ಲಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಉತ್ತಮ ವ್ಯವಸ್ಥೆಯ ಅಗತ್ಯವಿದೆ ಎಂದು ಜನರು ಆಗ್ರಹಿಸಿದ್ದಾರೆ.

ಹೊಸ ತಾಲ್ಲೂಕು ಹುಲಸೂರಿನಲ್ಲಿ ಸಹ ಸ್ಮಶಾನಗಳು ಸುಸ್ಥಿತಿಯಲ್ಲಿ ಇಲ್ಲ. ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲ. ಜನರಿಗೆ ಕೂರಲು ವ್ಯವಸ್ಥೆ ಇಲ್ಲ. ನೀರಿನ ವ್ಯವಸ್ಥೆಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT