ಔರಾದ್: ತಾಲ್ಲೂಕಿನ ಜೀರ್ಗಾ (ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕಟ್ಟಡದ ಚಾವಣಿಯ ಸಿಮೆಂಟ್ ಚಕ್ಕಳೆ ಕಳಚಿ ಬೀಳುತ್ತಿದ್ದು, ಶಿಕ್ಷಕರು ಆತಂಕದಲ್ಲಿಯೇ ಪಾಠ–ಪ್ರವಚನ ನಡೆಸಬೇಕಾಗಿದೆ. ಇಂತಹ ಅವಘಡದಿಂದ ತಪ್ಪಿಸಿಕೊಳ್ಳಲು ಶಿಕ್ಷಕರು, ಸದ್ಯ ಬಯಲಿನಲ್ಲಿಯೇ ಪಾಠ ಮಾಡುತ್ತಿದ್ದಾರೆ. ಮಳೆಯಾದರೆ ರಜೆ ನೀಡಲಾಗುತ್ತಿದ್ದು, ಇದರಿಂದಾಗಿ ಮಕ್ಕಳು ಪಾಠದಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ಹತ್ತಾರು ಯೋಜನೆ ಜಾರಿಗೊಳಿಸಿದೆ. ಕೋಟಿಗಟ್ಟಲೇ ಹಣ ವ್ಯಯಿಸುತ್ತಿದೆ. ಹಣ ನೀರಿನಂತೆ ಖರ್ಚಾಗುತ್ತಿದೆಯೇ ವಿನಾಃ ಶಾಲೆಗಳ ಮೂಲಸೌಲಭ್ಯ ಹಾಗೂ ಶಿಕ್ಷಣದ ಗುಣಮಟ್ಟದಲ್ಲಿ ಮಾತ್ರ ಬದಲಾವಣೆ ಆಗುತ್ತಿಲ್ಲ ಎಂದು ಶಿಕ್ಷಣ ಪ್ರೇಮಿಗಳು ದೂರಿದ್ದಾರೆ.
ತಾಲ್ಲೂಕಿನ ಜೀರ್ಗಾ(ಬಿ) ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗಿನ ಶಾಲೆಯಲ್ಲಿ 37 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂವರು ಕಾಯಂ ಹಾಗೂ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಒಟ್ಟು ನಾಲ್ಕು ಕೊಠಡಿಗಳಿದ್ದು, ಎಲ್ಲವೂ ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿ ಪ್ಲಾಸ್ಟರ್ ಕಳಚಿ ಬೀಳುತ್ತಿದೆ. ಮಳೆಯಾದರೆ ಚಾವಣಿ ಸೋರುತ್ತಿದೆ. ಹೀಗಾಗಿ ಕೆಲ ಮಕ್ಕಳನ್ನು ಬಯಲಲ್ಲಿ, ಇನ್ನು ಕೆಲ ಮಕ್ಕಳನ್ನು ಶಾಲೆ ವರಾಂಡದಲ್ಲಿ ಕೂಡಿಸಿ ಪಾಠ ಮಾಡಲಾಗುತ್ತಿದೆ. ಈ ಸಂಬಂಧ ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಆದರೆ ಮಕ್ಕಳಿಗೆ ಶಿಥಿಲ ಕಟ್ಟಡದಿಂದ ಮಾತ್ರ ಮುಕ್ತಿ ಸಿಗುತ್ತಿಲ್ಲ.
‘ಶಾಲೆ ಕಟ್ಟಡ ಸುಮಾರು 50 ವರ್ಷ ಹಳೆಯದಿರಬಹುದು. ನಾಲ್ಕು ವರ್ಷದಿಂದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಈ ವರ್ಷ ಮಳೆ ಜಾಸ್ತಿಯಾಗಿ ಮತ್ತಷ್ಟು ಹಾಳಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಮಕ್ಕಳಿಗೆ ಮರದ ಕೆಳಗೆ ಹಾಗೂ ವರಾಂಡದಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದೇವೆ. ಮಳೆ ಜಾಸ್ತಿಯಾದರೆ ಮಕ್ಕಳನ್ನು ಮನೆಗೆ ಕಳುಹಿಸುತ್ತೇವೆ’ ಎಂದು ಪ್ರಭಾರ ಮುಖ್ಯಶಿಕ್ಷಕ ಜೈರಾಜ್ ಚವ್ಹಾಣ ಹೇಳಿದರು.
ಜೀರ್ಗಾಕ್ಕೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 60/80 ಅಳತೆ ಜಾಗದಲ್ಲಿ ಈ ಶಾಲೆ ಕಟ್ಟಡ ಇದೆ. ರಸ್ತೆಯ ಆಚೆ ಶೌಚಾಲಯ ಇದೆ. ಕಾಂಪೌಂಡ್ ಇಲ್ಲದಿರುವುದು ಸೇರಿದಂತೆ ಈ ಶಾಲೆ ಮಕ್ಕಳು ಹಾಗೂ ಶಿಕ್ಷಕರು ಜೀವ ಭಯದಲ್ಲೇ ಕಾಲ ಕಳೆಯಬೇಕಾಗಿದೆ ಎನ್ನುತ್ತಾರೆ ಜೀರ್ಗಾ ಗ್ರಾಮಸ್ಥರು. ದಶಕದ ಹಿಂದೆ ಜೀರ್ಗಾ ಸರ್ಕಾರಿ ಶಾಲೆಗೆ ಉತ್ತಮ ಹೆಸರಿತ್ತು. ಕಟ್ಟಡ ಹಾಗೂ ಇತರೆ ಮೂಲಸೌಲಭ್ಯ ಕೊರತೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಬಹಳ ವರ್ಷಗಳಿಂದ ಇಲ್ಲಿ ಜಾಗದ ಸಮಸ್ಯೆಯಿದೆ. ಹೀಗಾಗಿ ಇಲ್ಲಿ ಕಟ್ಟಡ ಆಗಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲ ಎಂದು ಶಾಲೆಯ ಹಳೆ ವಿದ್ಯಾರ್ಥಿ ಶಿವಾನಂದ ಕಳವಳ ವ್ಯಕ್ತಪಡಿಸುತ್ತಾರೆ.
ಜೀರ್ಗಾ(ಬಿ) ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡಿರುವುದು ನಮಗೂ ಮಾಹಿತಿಯಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗ ಮಳೆಗಾಗಾಲ ಇರುವುದರಿಂದ ಮಕ್ಕಳ ಹಿತ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡುತ್ತೇವೆಸುಧಾರಾಣಿ, ಬಿಇಒ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.