ಮಂಗಳವಾರ, ಏಪ್ರಿಲ್ 13, 2021
23 °C
ಓದುಗರಿಗೆ ಹೊಸ ಪುಸ್ತಕಗಳ ನೋಡುವ ಭಾಗ್ಯವೂ ಇಲ್ಲ

ಗ್ರಂಥಾಲಯಗಳಲ್ಲಿ ಸೌಕರ್ಯಗಳದ್ದೇ ಕೊರತೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ 180 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳು ಇವೆ. ನಗರ ಪ್ರದೇಶಗಳಲ್ಲಿ 7 ಶಾಖಾ ಗ್ರಂಥಾಲಯ, ಕೊಳಚೆ ಪ್ರದೇಶದಲ್ಲಿ 4 ಗ್ರಂಥಾಲಯ ಹಾಗೂ ಜಿಲ್ಲೆಯಲ್ಲಿ ಒಟ್ಟು 5 ಸಂಚಾರಿ ಗ್ರಂಥಾಲಯಗಳು ಇವೆ. ಆದರೆ, ಬಹುತೇಕ ಕಟ್ಟಡಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿನ ಗ್ರಂಥಾಲಯಗಳಲ್ಲಿ ಸರಿಯಾಗಿ ಶೌಚಾಲಯಗಳೇ ಇಲ್ಲದ ಕಾರಣ ಮಹಿಳೆಯರು ಗ್ರಂಥಾಲಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಬೀದರ್‌ ತಾಲ್ಲೂಕಿನ ಮಂದಕನಳ್ಳಿ, ಕಪಲಾಪುರ, ಚಿಲ್ಲರ್ಗಿ, ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ, ನಾರಾಯಣಪುರ, ಔರಾದ್ ತಾಲ್ಲೂಕಿನ ಸಂತಪುರ, ಮುಧೋಳ, ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ, ದುಬಲಗುಂಡಿ, ಧುಮ್ಮನಸೂರ, ಹಳ್ಳಿಖೇಢ(ಕೆ), ಮನ್ನಾಎಖ್ಖೆಳ್ಳಿ, ಕೊಡಂಬಲ್, ಭಾಲ್ಕಿ ತಾಲ್ಲೂಕಿನ ದಾಡಗಿ, ಭಾತಂಬ್ರಾ ಹಾಗೂ ಹಲಬರ್ಗಾದಲ್ಲಿ ಮಾತ್ರ ಸ್ವಂತ ಕಟ್ಟಡ ಇದೆ. ದಾಡಗಿಯಲ್ಲಿ ಹೊಸ ಕಟ್ಟಡವೇ ಹಾಳು ಬಿದ್ದಿದೆ.

ಬೀದರ್ ತಾಲ್ಲೂಕಿನಲ್ಲಿ 33, ಬಸವಕಲ್ಯಾಣದಲ್ಲಿ 34, ಔರಾದ್‌ನಲ್ಲಿ 38, ಹುಮನಾಬಾದ್‌ನಲ್ಲಿ 28 ಹಾಗೂ ಭಾಲ್ಕಿ ತಾಲ್ಲೂಕಿನ 32 ಗ್ರಾಮಗಳಲ್ಲಿ ಗ್ರಂಥಾಲಯ ಕಟ್ಟಡಗಳಿಗೆ ಸ್ವಂತ ಕಟ್ಟಡಗಳಿಲ್ಲ. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿದ್ದಾರೆ. ಹಿಂದೆ ಜಿಲ್ಲೆಗೆ ಬಂದ ಅನೇಕ ಜಿಲ್ಲಾಧಿಕಾರಿಗಳು ಗ್ರಂಥಾಲಯಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಕಾಟಾಚಾರಕ್ಕೆ ಸಭೆಗಳನ್ನು ನಡೆಸಿದ್ದನ್ನು ಬಿಟ್ಟರೆ ಏನೂ ಮಾಡಿಲ್ಲ. ಗ್ರಂಥಾಲಯ ಇಲಾಖೆಯಲ್ಲಿ ಪೂರ್ಣಾವಧಿಯ ಅಧಿಕಾರಿಗಳೇ ಇಲ್ಲ. ಅನೇಕ ವರ್ಷಗಳಿಂದ ಪ್ರಭಾರಿಗಳೇ ದರ್ಬಾರು ನಡೆಸಿದ್ದಾರೆ.

ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿರುವ ಪ್ರಭಾರ ಅಧಿಕಾರಿಗಳನ್ನು ಜಿಲ್ಲೆಯಿಂದ ಬೇರೆ ಕಡೆಗೆ ವರ್ಗ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಹೈಟೆಕ್‌ ಗ್ರಂಥಾಲಯ ನಿರ್ಮಿಸಬೇಕು. ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲಿರುವ ಹಿತವನ್ನು ಗಮನದಲ್ಲಿಕೊಂಡು ಹೊಸ ಗ್ರಂಥಾಲಯ ನಿರ್ಮಿಸಬೇಕು ಎಂದು ಕಾಲೇಜು ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದಾರೆ ಆದರೆ, ಪ್ರಯೋಜನ ಆಗಿಲ್ಲ.

ಮೂಗು ಮುಚ್ಚಿಕೊಂಡು ಗ್ರಂಥಾಲಯಕ್ಕೆ ಬನ್ನಿ:

ಜಿಲ್ಲಾ ಕೇಂದ್ರ ಬೀದರ್ ನಗರದಲ್ಲಿರುವ ಗ್ರಂಥಾಲಯ ಕಟ್ಟಡ ಕಳೆಗುಂದಿದೆ. ಹಲವು ವರ್ಷಗಳಿಂದ ಸುಣ್ಣಬಣ್ಣ ಕಂಡಿಲ್ಲ. ಆವರಣದಲ್ಲಿ ನಿತ್ಯ ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಕಪಾಟುಗಳನ್ನು ಮೂಲೆಗೆ ಸೇರಿಸಲಾಗಿದೆ. ಕೊಠಡಿಯೊಂದರಲ್ಲಿ ಕುರ್ಚಿಗಳನ್ನು ಕೂಡು ಹಾಕಲಾಗಿದೆ. ಓದಲು ಬರುವ ವಿದ್ಯಾರ್ಥಿಗಳು ಕುರ್ಚಿಗಳನ್ನು ಕೇಳಿದರೂ ಕೊಡುತ್ತಿಲ್ಲ.

ಗ್ರಂಥಾಲಯದ ಹಿಂಬದಿಗೆ ತೆರೆದ ಮೂತ್ರಾಲಯ ಇದೆ. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಬೇಕಾದರೆ ಒಬ್ಬರು ಕಾವಲುಗಾರರನ್ನು ನಿಲ್ಲಿಸಬೇಕು. ನಂತರವೇ ಒಳಗೆ ಹೋಗಬೇಕಾದ ಸ್ಥಿತಿ ಇದೆ. ಅಧಿಕಾರಿಗಳು ಇಂತಹ ಗಲೀಜು ವಾತಾವರಣದಲ್ಲೇ ಕಣ್ಣು ಮುಚ್ಚಿ ಕೆಲಸ ಮಾಡುತ್ತಿದ್ದಾರೆ.

ಗ್ರಂಥಾಲಯದಲ್ಲಿ ಕೆಟಲಾಗ್‌ ವ್ಯವಸ್ಥೆ ಇಲ್ಲ. ಓದುಗರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಒಂದು ಗಂಟೆ ಮೊದಲೇ ಬಂದ್‌ ಮಾಡಲಾಗುತ್ತಿದೆ. ಹೊಸ ಪುಸ್ತಕಗಳನ್ನು ಕೊಡುತ್ತಿಲ್ಲ. ಶೌಚಾಲಯದ ದುರ್ಗಂಧ ಕೊಠಡಿಯೊಳಗೆ ಬರುತ್ತಿದೆ. ಇಲ್ಲಿಯ ಅಧಿಕಾರಿಗಳು ತಮ್ಮದೇ ಕಾನೂನು ಮಾಡಿಕೊಂಡು ಸಮಯ ಮುಗಿಯುವ ಮೊದಲೇ ಓದುಗರನ್ನು ಗ್ರಂಥಾಲಯದಿಂದ ಹೊರಗೆ ಕಳಿಸುತ್ತಿದ್ದಾರೆ ಎಂದು ಓದುಗರಾದ ಪ್ರಶಾಂತ ಭಾಲ್ಕಿ, ಬಸವರಾಜ ಮಡ್ಡಿ, ಅಮಿತ್ ಮಲಕನೂರ, ಇಸ್ಮೈಲ್ ಹೆರಗಾಪುರ, ಭಗವಂತ ಹಾಗೂ ವಿದ್ಯಾರ್ಥಿನಿ ಜಗದೇವಿ ಬೇಸರ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ 1987ರಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಹರ್ಷ ಗುಪ್ತ ಜಿಲ್ಲಾಧಿಕಾರಿಯಾಗಿದ್ದಾಗ ₹ 3.5 ಕೋಟಿ ವೆಚ್ಚದ ಹೈಟೆಕ್‌ ಗ್ರಂಥಾಲಯಕ್ಕೆ ಯೋಜನೆ ರೂಪಿಸಿದ್ದರು. ಅದಕ್ಕೆ ವಿಜ್ಙಾನ ಕೇಂದ್ರದ ಬಳಿ ಜಾಗವನ್ನೂ ಗುರುತಿಸಲಾಗಿತ್ತು. ಅಲ್ಲಿ ಓದುಗರು ಬರುವುದಿಲ್ಲ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ಕೊಟ್ಟು ಕಟ್ಟಡ ನಿರ್ಮಾಣವಾಗದಂತೆ ಮಾಡಿದ್ದಾರೆ ಎಂದು ಓದುಗರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು