ಶನಿವಾರ, ಮೇ 8, 2021
26 °C
ತಕ್ಷಣ ಸ್ಪಂದಿಸಲು ಶಾಸಕ ಈಶ್ವರ ಖಂಡ್ರೆ ಆಗ್ರಹ

ಆಮ್ಲಜನಕ ಕೊರತೆ: ಅಪಾಯದಲ್ಲಿ 36 ಕೊರೊನಾ ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಕಡಿಮೆ ಪ್ರಮಾಣದ ಆಮ್ಲಜನಕ ಲಭ್ಯವಿದ್ದು, ಆಮ್ಲಜನಕ ಪೂರೈಕೆ ಆಗದಿದ್ದಲ್ಲಿ 36 ಕೋವಿಡ್‌ ರೋಗಿಗಳ ಪ್ರಾಣ ಅಪಾಯಕ್ಕೆ ಸಿಲುಕಲಿದೆ’ ಎಂದು ಶಾಸಕ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ.

‘ಈ ಬಗ್ಗೆ ನಾನು ಕಳೆದ 2 ದಿನಗಳಿಂದ ಮುಖ್ಯಮಂತ್ರಿ ಕಚೇರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗೆ, ಆರೋಗ್ಯ ಇಲಾಖೆ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಪತ್ರ ಬರೆದು ಮತ್ತು ಮುಖ್ಯಕಾರ್ಯದರ್ಶಿ ಮತ್ತು ಆರೋಗ್ಯ ಆಯುಕ್ತರಿಗೆ ಖುದ್ದು ಕರೆ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದ್ದಾರೆ.

‘ಸರ್ಕಾರಕ್ಕೆ ರಾಜ್ಯದ ಜನರ ಜೀವ ಉಳಿಸುವ ಬದ್ಧತೆಯೇ ಇಲ್ಲವೇ? ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿ ಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ 1043 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಆಗುತ್ತದೆ. ನಾವು ಉತ್ಪಾದಿಸುವ ಆಮ್ಲಜನಕ ಬಳಕೆಗೆ ನಮಗೆ ಅಧಿಕಾರ ಇಲ್ಲ. ನಾವು ಕೇಂದ್ರದ ಮುಂದೆ ಆಮ್ಲಜನಕಕ್ಕೆ ಅರ್ಜಿ ಹಾಕಿ ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಮತ್ತು 25 ಸಂಸದರಿಗೆ ಕೇಂದ್ರದ ಮೇಲೆ ಒತ್ತಡ ಹೇರಿ ಪ್ರಾಣವಾಯು ತರುವ ತಾಕತ್ತು ಇಲ್ಲ. ಕನಿಷ್ಠ ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕ ಬೇರೆ ರಾಜ್ಯಕ್ಕೆ ಹೋಗದಂತೆ ತಡೆಯಿರಿ’ ಎಂದು ಆಗ್ರಹಿಸಿದ್ದಾರೆ.

‘ಚಾಮರಾಜನಗರದಲ್ಲಿ ಒಟ್ಟು 24 ಸಾವು ಒಂದೇ ದಿನ ಸಂಭವಿಸಿದ ಕಾರಣ ಆಮ್ಲಜನಕ ಕೊರತೆ ಜಗತ್ತಿಗೆ ತಿಳಿದಿದೆ. ನಿತ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಜನ ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಭಾಲ್ಕಿಯಲ್ಲಿ ಅನಾಹುತ ಸಂಭವಿಸಿದರೆ ಆ ಎಲ್ಲ ಸಾವಿನ ಹೊಣೆಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರವೇ ಹೊರಬೇಕಾಗುತ್ತದೆ. ಇದನ್ನು ಕೊಲೆಗಡುಕ ಸರ್ಕಾರ ಎಂದು ಘೋಷಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು