ಭಾನುವಾರ, ಸೆಪ್ಟೆಂಬರ್ 19, 2021
29 °C
ಬಾರದ ಬಸ್‌, ರಸ್ತೆಯಲ್ಲಿ ಗುಂಡಿ: ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

ಸಮಸ್ಯೆ ಸುಳಿಯಲ್ಲಿ ಎಕಲಾಸಪೂರವಾಡಿ

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಎಕಲಾಸಪೂರವಾಡಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ.

ತಾಲ್ಲೂಕಿನ ದಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದ ಜನರನ್ನು ಸಮಸ್ಯೆಗಳು ಬಾಧಿಸುತ್ತಿವೆ. ಇದು ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. ಸುಮಾರು 1200 ಜನಸಂಖ್ಯೆ ಹೊಂದಿದೆ.

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಗ್ರಾಮಕ್ಕೆ ಬಸ್‌ ಬಾರದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಹಿನ್ನಡೆಯಾಗುತ್ತಿದೆ. ಮನೆಗಳಲ್ಲಿ ದ್ವಿಚಕ್ರ ವಾಹನ ಇರುವವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಆಟೊ ವ್ಯವಸ್ಥೆ ಮಾಡಿಸುತ್ತಾರೆ. ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳ ಮಕ್ಕಳಿಗೆ ನಿತ್ಯ ಸುಮಾರು 7 ಕಿ.ಮೀ ನಡೆದುಕೊಂಡು ಹೋಗಿ ಬರುವುದು ತಪ್ಪಿಲ್ಲ.

‘ಈ ಸಮಸ್ಯೆಯಿಂದಾಗಿ ಕೆಲ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಧಾಕರ ಭೀಮರಾವ್‌, ಸೀಮಾಬಾಯಿ ಹಾಗೂ ಕಲಾವತಿ ಕಳವಳ ವ್ಯಕ್ತಪಡಿಸುತ್ತಾರೆ.

ಕೆಲ ವರ್ಷಗಳ ಹಿಂದೆ ಗ್ರಾಮಕ್ಕೆ ರಸ್ತೆ ಇಲ್ಲ, ತಿರುವಿನಲ್ಲಿ ಸೇತುವೆ ಸಮಸ್ಯೆ ಇದೆ. ಹಾಗಾಗಿ, ಬಸ್‌ ಬಿಡಲು ಆಗುವುದಿಲ್ಲ ಎಂದು ಹೇಳಿದ್ದ ಅಧಿಕಾರಿಗಳು ನಂತರ ರಸ್ತೆ, ಸೇತುವೆ ಕಾರ್ಯ ಪೂರ್ಣಗೊಂಡ ನಂತರ ಕೇವಲ ಎರಡು ತಿಂಗಳು ಮಾತ್ರ ಬಸ್‌ ಓಡಿಸಿದ್ದಾರೆ. ನಂತರ ಬರಲೇ ಇಲ್ಲ. ಜನಪ್ರತಿನಿಧಿ, ಅಧಿಕಾರಿಗಳು ಬದ್ಧತೆ ಪ್ರದರ್ಶಿಸಿ ವಿದ್ಯಾರ್ಥಿಗಳ, ಗ್ರಾಮಸ್ಥರ ಹಿತದೃಷ್ಟಿಯಿಂದ ಏನೇ ಸಮಸ್ಯೆ ಇದ್ದರೂ ಪರಿಹರಿಸಿ ಗ್ರಾಮಕ್ಕೆ ನಿತ್ಯ ಶಾಲಾ ಸಮಯದಲ್ಲಿ ಬಸ್‌ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ.

ನಾಲ್ಕು ತಿಂಗಳುಗಳ ಹಿಂದೆ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕೊಡಿಸುವ ಸಂಬಂಧ ಹಳೆಯದಾದ ಸಿಸಿ ರಸ್ತೆ ಮಧ್ಯದ ಭಾಗ ಅಗೆದು ಮುಚ್ಚಲಾಗಿದೆ. ಈಗ ದೊಡ್ಡ ಗಾತ್ರದ ಗುಂಡಿಯಂತೆ ರಸ್ತೆ ಆಗಿದೆ. ಹಿರಿಯ ಜೀವಿಗಳಿಗೆ ನಡೆದಾಡಲು ಆಗುತ್ತಿಲ್ಲ. ಚಿಕ್ಕ ಮಕ್ಕಳು ಬೀಳುವಂತಾಗಿದೆ. ಕೆಲವರು ಬಿದ್ದು ಗಾಯ ಕೂಡ ಮಾಡಿಕೊಂಡಿದ್ದಾರೆ ಎಂದು ಮಹಿಳೆಯರಾದ ಉಜ್ವಲಾಬಾಯಿ, ಕಲ್ಪನಾ ಮುರಾಳೆ, ಲಕ್ಷ್ಮೀ ಮುರಾಳೆ, ಸುವರ್ಣಾ ಮುರಾಳೆ ಅಳಲು ತೋಡಿಕೊಂಡರು. ಊರಿನ ತುಂಬೆಲ್ಲ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು. ಸಕಾಲಕ್ಕೆ ಗ್ರಾಮದ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಕಪಕ್ಕ ಬೆಳೆದಿರುವ ಮುಳ್ಳು–ಕಂಟಿ, ಹೊಲಸನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು