ಬೀದರ್: ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸಾ ಸೌಲಭ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಬೀದರ್ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಸರಸ್ವತಿ ಗುರುಪಾದಪ್ಪ ನಾಗಮಾರಪಳ್ಳಿ ಸ್ಮರಣಾರ್ಥ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸೆಗೆ ಉಪಯೋಗಿಸುವ ಸಾಧನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ತಾಯಿ ಮತ್ತು ನವಜಾತ ಶಿಶುಗಳ ಚಿಕಿತ್ಸೆಗೆ ಹೆಸರಾಗಿರುವ ಈ ಆಸ್ಪತ್ರೆಯಲ್ಲಿ ಇನ್ನು ಮುಂದೆ ಹೊಲಿಗೆ ಇಲ್ಲದೆ, ನೋವಿಲ್ಲದೆ ತ್ವರಿತವಾಗಿ ಗುಣಮುಖವಾಗುವ ಲ್ಯಾಪ್ರೊಸ್ಕೋಪಿಕ್ ಶಸ್ತ್ರಕ್ರಿಯೆಗಳು ನಡೆಯಲಿವೆ. ಟ್ಯೂಬೆಕ್ಟೊಮಿ, ಅಪೆಂಡಿಕ್ಸ್, ಗಾಲ್ ಬ್ಲಾಡರ್, ಕಿಡ್ನಿಯಲ್ಲಿನ ಕಲ್ಲು, ಇಎನ್‍ಟಿ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸೆ ಉಪಯುಕ್ತವಾಗಿದೆ. ಸಣ್ಣ ರಂಧ್ರದ ನೆರವಿನಿಂದ ಶಸ್ತ್ರಕ್ರಿಯೆ ಮಾಡುವುದರಿಂದ ಹೆಚ್ಚಿನ ನೋವು ಇರುವುದಿಲ್ಲ. ರೋಗಿ ಬೇಗ ಗುಣಮುಖರಾಗಬಹುದು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಒಂದೇ ರೂಪಾಯಿಗೆ ಚಿಕಿತ್ಸೆ ನೀಡಲಾಗಿತ್ತು. ಸೋಂಕಿನಿಂದ ಮೃತಪಟ್ಟವರನ್ನು ಗೌರವಪೂರ್ವಕವಾಗಿ ಅಂತ್ಯಕ್ರಿಯೆ ಮಾಡಲಾಗಿತ್ತು. ಆಸ್ಪತ್ರೆಯು ತಾಯಿ ಹಾಗೂ ನವಜಾತ ಶಿಶುಗಳ ಚಿಕಿತ್ಸೆಗೆ ಹೆಸರಾಗಿದೆ. ಒಂದೇ ದಿನದ ಶಿಶುವಿಗೆ ಹೃದಯದ ರಂಧ್ರದ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಆಸ್ಪತ್ರೆಯ ನಿರ್ದೇಶಕರಾದ ಸಿದ್ರಾಮ ಡಿ.ಕೆ., ಡಾ. ಚಂದ್ರಕಾಂತ ಗುದಗೆ, ಶಕುಂತಲಾ ಬೆಲ್ದಾಳೆ, ಡಾ. ರಜನೀಶ ವಾಲಿ, ಡಾ. ವಿಜಯಕುಮಾರ ಕೋಟೆ, ಸಂತೋಷ ತಾಳಂಪಳ್ಳಿ, ಜಯಕುಮಾರ ಕಾಂಗೆ, ವಿಜಯಲಕ್ಷ್ಮೀ ಹೂಗಾರ, ರಾಮದಾಸ ತುಳಸಿರಾಮ, ಸೈಯದ್ ಖಿಜರುಲ್ಲ, ಬಾಲಾಜಿ ಚವಾಣ್, ವೀರಶೆಟ್ಟಿ ಪಟ್ನೆ, ಶಂಕರ ಪಾಟೀಲ ಅತಿವಾಳ, ಉದಯಕುಮಾರ ಹಲವಾಯಿ, ಡಾ. ವೈಜನಾಥ ತೂಗಾವೆ, ಡಾ. ಬಿ.ಎಸ್ ಪ್ರಭಾ, ಡಾ. ಮದನಾ ವೈಜನಾಥ, ಡಾ. ಸಿ. ಆನಂದರಾವ್, ಡಾ. ಎಸ್.ಆರ್. ಹಣಮಶೆಟ್ಟಿ, ಡಾ. ಎಂ.ಎ. ಶೇರಿಕಾರ್, ಡಾ. ಮಲ್ಲಿಕಾರ್ಜುನ ಪನಶೆಟ್ಟಿ, ಆಸ್ಪತ್ರೆಯ ಸಿಇಒ ಕೃಷ್ಣಾರೆಡ್ಡಿ, ಆಡಳಿತಾಧಿಕಾರಿ ಡಾ. ದೀಪಕ ಚೋಕಡೆ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.