ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವಿನಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಶರಣ ಉದ್ಯಾನದಲ್ಲಿ 232ನೇ ಶರಣ ಸಂಗಮ- ನಗೆಹಬ್ಬ ಕಾರ್ಯಕ್ರಮ
Last Updated 22 ಮಾರ್ಚ್ 2019, 13:44 IST
ಅಕ್ಷರ ಗಾತ್ರ

ಬೀದರ್: ‘ಒತ್ತಡ ದೂರ ಮಾಡುವ ಸಾಧನ ನಗು. ಮನಸೋಕ್ತ ನಗುವಿನಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎಂದು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ನುಡಿದರು.

ನಗರದ ಶರಣ ಉದ್ಯಾನದಲ್ಲಿ ಆಯೋಜಿಸಿದ್ದ 232ನೇ ಶರಣ ಸಂಗಮ -ನಗೆಹಬ್ಬ ಕಾರ್ಯಕ್ರಮದಲ್ಲಿ ‘ಬಹುರೂಪಿ ಚೌಡಯ್ಯನವರ ಜೀವನ ಸಂದೇಶ’ ಕುರಿತು ಅವರು ಮಾತನಾಡಿದರು.

‘ಒಂದು ವೃಕ್ಷ ಸ್ಥಿರವಾಗಿ ನಿಲ್ಲಬೇಕಾದರೆ ತಾಯಿಬೇರು ಮುಖ್ಯ. ಹಾಗೆಯೇ ಸಮಾಜದಲ್ಲಿ ಸಮೃದ್ಧಿ ಸ್ಥಿರವಾಗಿ ನಿಲ್ಲಬೇಕಾದರೆ ಮಾನವ ಕುಲಕ್ಕೆ ಕಾಯಕವೇ ತಾಯಿಬೇರು’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಕಾಯಕದ ಹಾಲ್ಹೊಳೆ ಹರಿದು ದಾಸೋಹದ ತೆಪ್ಪ ತೇಲಾಡಿದ ಕಾರಣ ಕಲ್ಯಾಣವೇ ಸ್ವರ್ಗವಾಗಿತ್ತು. ಇಂಥ ಇತಿಹಾಸ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ವೇದ ಓದುವವರು ಶ್ರೇಷ್ಠ. ದುಡಿಯುವವರು ಕೀಳು ಎನ್ನುವುದನ್ನು ಅಲ್ಲಗಳೆದ ಬಸವಣ್ಣನವರು ಉದ್ಯೋಗಕ್ಕೆ ಪಟ್ಟಗಟ್ಟಿದರು. ಕಾಯಕವೇ ಕೈಲಾಸವೆಂದು ಸಾರಿದರು’ ಎಂದು ಹೇಳಿದರು.

‘ಪ್ರತಿಯೊಬ್ಬರ ಕೌಶಲ ಗುರುತಿಸಿ ಪ್ರೋತ್ಸಾಹಿಸಿ ಕಾಯಕ ಘನತೆ ನೆಲೆಗೊಳಿಸಿದರು. ಅದರ ಫಲವಾಗಿ ಬೀದರ್ ಜಿಲ್ಲೆಯ ರೇಕುಳಗಿಯ ಶರಣ ಬಹುರೂಪಿ ಚೌಡಯ್ಯನವರು ಬಹುರೂಪಗಳನ್ನು ಧರಿಸಿ ಜನರನ್ನು ನಗಿಸುವುದೇ ಕಾಯಕವಾಗಿ ಸ್ವೀಕರಿಸಿದ್ದರು. ವಿಧವಿಧವಾದ ವೇಷಗಳನ್ನು ಧರಿಸಿ ಹಾಡಿ-ಹಾಡಿ, ಕುಣಿದು-ಕುಣಿದು ಜನರನ್ನು ರಂಜಿಸುತ್ತಲೇ ಅನುಭವ ಮಂಟಪದ ವಿದ್ಯಾಮಾನಗಳನ್ನು ಬಿತ್ತರಿಸುತ್ತಿದ್ದರು. ಆತ್ಮವಿದ್ಯೆಯ ದಾರಿ ತೋರುತ್ತಿದ್ದರು. ಅವರು ಬಹುರೂಪ ಆಡುತ್ತಿದ್ದರೇ ಪುರವೆಲ್ಲ ಮೈಮರೆತು ನೋಡಿ ಆನಂದಿಸುತ್ತಿದ್ದರು’ ಎಂದು ಹೇಳಿದರು.

ಗಂಗಾಂಬಿಕೆ ಅಕ್ಕ ಸಮಾರಂಭದ ನೇತೃತ್ವ ವಹಿಸಿದ್ದರು. ಬಿ.ಎಸ್.ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಚಂದ್ರಶೇಖರ ತಾಂಡೂರೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗಂಗಪ್ಪ ಸಾವಲೆ ಅಧ್ಯಕ್ಷತೆವಹಿಸಿದ್ದರು.
ಕಲಬುರ್ಗಿ ಎಫ್.ಎಂ.ರೇಡಿಯೊ ಕಲಾವಿದೆ ಬಾಜುಮನಿ ಅಕ್ಕೋರು ಖ್ಯಾತಿಯ ಆರ್.ಜೆ.ವಾಣಿ ಸುದೀಪ ಅವರು
ಬೀದರ್‌ ಭಾಷೆಯಲ್ಲಿ ಬಾಜು ಮನಿಯ ವಿದ್ಯಾಮಾನಗಳ ಕುರಿತು ಅರುಳು ಹುರಿದಂತೆ ಮಾತನಾಡಿ ಸಭಿಕರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT