ಮಂಗಳವಾರ, ನವೆಂಬರ್ 19, 2019
23 °C
ವಕೀಲರ ಸಂಘದಿಂದ ಸಭಿನಂದನಾ ಸಮಾರಂಭ

ವಕೀಲರ ಸೇವೆ ಮಹತ್ವದ್ದು: ಖಂಡ್ರೆ

Published:
Updated:
Prajavani

ಭಾಲ್ಕಿ: ಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವಲ್ಲಿ ವಕೀಲರು, ತಾಲ್ಲೂಕು ಕೋರ್ಟ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವಕೀಲ ವೃತ್ತಿ  ಪವಿತ್ರವಾದದ್ದು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವಣರದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

60ರ ದಶಕದಲ್ಲಿ ನಮ್ಮ ತಂದೆ ಭೀಮಣ್ಣ ಖಂಡ್ರೆ ಶಾಸಕರಾಗಿದ್ದ ಸಂದರ್ಭದಲ್ಲಿ ₹82 ಸಾವಿರ  ವೆಚ್ಚದಲ್ಲಿ ಕೋರ್ಟ್ ಸಂಕೀರ್ಣ ನಿರ್ಮಾಣಗೊಂಡಿತು. ಹಳೆಯ ಕೋರ್ಟ್ ಸಂಪೂರ್ಣ ಶಿಥಿಲಗೊಂಡಿದ್ದು, ಹೊಸ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಿತ್ತು ಎಂದರು.

ಇಲ್ಲಿನ ವಕೀಲರ ಸಂಘ ಹಾಗೂ ಹೈಕೋರ್ಟ್‍ನಲ್ಲಿ ನ್ಯಾಯಾಧೀಶರಾಗಿದ್ದ ಈ ಭಾಗದ ಎನ್.ಕೆ.ಪಾಟೀಲ ನೇತೃತ್ವದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣ ಕುರಿತು ಪ್ರಸ್ತಾವ  ಬಂದಿದ್ದವು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ  ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಅವರು
ತಿಳಿಸಿದರು.

ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ರಾಜ್ಯದ ಮಾದರಿ ಕೋರ್ಟ್‍ಗಳಲ್ಲಿ ಒಂದಾಗಲಿದೆ. ವಕೀಲರ ಸಂಘದ ಪ್ರಮುಖರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡದ ಕಾಮಗಾರಿ ಮೇಲೆ ನಿಗಾ ವಹಿಸಬೇಕು. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ನ್ಯಾಯಾಧೀಶರು ಹಾಗೂ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ಪಾಟೀಲ ಮಾತನಾಡಿದರು. ಹಿರಿಯ ವಕೀಲ ರಾಜಶೇಖರ ಅಷ್ಟೂರೆ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್‍ನ ಮಾಜಿ ಉಪಸಭಾಪತಿ ಕೇಶವರಾವ್ ನಿಟ್ಟೂರಕರ್, ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ರಾಜೇಂದ್ರ ನಿಟ್ಟೂರಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ವಕೀಲರ ಸಂಘದ ಉಪಾಧ್ಯಕ್ಷ ರಾಹುಲ್ ಸಾವಳೆ, ಜಂಟಿ ಕಾರ್ಯದರ್ಶಿ ಸಾರಂಗ ಸೂರ್ಯವಂಶಿ ಇದ್ದರು.

ವಕೀಲ ಶ್ರೀಕಾಂತ ಭೋರಾಳೆ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಮಹೇಶ ರಾಚೋಟೆ ವಂದಿಸಿದರು.

ಪ್ರತಿಕ್ರಿಯಿಸಿ (+)