ನೈತಿಕ ಮೌಲ್ಯಗಳ ಬೆಳೆಸಿಕೊಳ್ಳಿ

7
ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಸಲಹೆ

ನೈತಿಕ ಮೌಲ್ಯಗಳ ಬೆಳೆಸಿಕೊಳ್ಳಿ

Published:
Updated:
Deccan Herald

ಬೀದರ್‌: ‘ಪ್ರತಿಯೊಬ್ಬರಿಗೆ ವಿದ್ಯಾರ್ಥಿ ಜೀವನ ಒಂದು ಸುವರ್ಣ ಅವಧಿಯಾಗಿದೆ. ವಿದ್ಯಾರ್ಥಿಗಳು ಯುವಾವಸ್ಥೆಯಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆ್ಯಸಿಡ್‌ ದಾಳಿಗೆ ಒಳಗಾದವರಿಗೆ ಕಾನೂನು ಸೇವೆಗಳ ಯೋಜನೆ-2016ರ ಅಡಿಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು. ಒಂದು ಸಾರಿ ಈ ಜೀವನ ಕಳೆದು ಹೋದರೆ ಮತ್ತೆಂದೂ ತಿರುಗಿ ಬಾರದು. ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿದರೆ ಮುಂದಿನ ಇಡೀ ಜೀವನ ಉಜ್ವಲವಾಗುತ್ತದೆ’ ಎಂದು ತಿಳಿಸಿದರು.

‘ಉತ್ತಮ ಕೃತಿಗಳನ್ನು ಓದಬೇಕು. ಕಾನೂನುಗಳ ಬಗ್ಗೆಯೂ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಸಾರ್ವಜನಿಕರ ಹಿತಕ್ಕಾಗಿಯೇ ಇರುವ ಕಾನೂನುಗಳನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಇದೆ ಎನ್ನುವ ತಿಳಿವಳಿಕೆ ಇದ್ದರೆ ಸಹಜವಾಗಿಯೇ ಅಪರಾಧಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ’ ಎಂದು ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಶರಣಪ್ಪ ಚಿಟ್ಟಾ ಹೇಳಿದರು.

‘ವಯೋಸಹಜ ತಪ್ಪಿನಿಂದಾಗಿ ಕೆಲವರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಒಮ್ಮುಖ ಪ್ರೇಮ ಅಥವಾ ಭಗ್ನಪ್ರೇಮದಿಂದಾಗಿ ಕೆಲವು ಯುವಕರು ಮಾನಸಿಕ ಸ್ಥಿಮಿತ ಕಳೆದುಕೊಂಡು ಯುವತಿಯರ ಮೇಲೆ ದಾಳಿ ಇಟ್ಟ ಪ್ರಕರಣಗಳು ಅನೇಕ ಇವೆ. ಇಂತಹ ಪ್ರಕರಣಗಳಲ್ಲಿ ಯುವತಿಯರು ಕಾನೂನು ನೆರವು ಪಡೆಯಬಹುದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ರಾಘವೇಂದ್ರ ಮಾತನಾಡಿ, ‘ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಪ್ರೀತಿ-ಪ್ರೇಮಗಳಿಂದ ದೂರ ಇರಬೇಕು. ಭವಿಷ್ಯ ರೂಪಿಸುವ ಅಧ್ಯಯನದತ್ತ ಹೆಚ್ಚು ಗಮನ ಕೊಡಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ಜನರ ರಕ್ಷಣೆಗಾಗಿಯೇ ಕಾನೂನುಗಳು ರೂಪುಗೊಂಡಿವೆ. ಆ್ಯಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಂದ್ರಕಾಂತ ನಾಸಿ ಹಾಗೂ ಕುಟುಂಬ ಕಲ್ಯಾಣ ಸಮಿತಿಯ ಸದಸ್ಯ ಬಿ.ಎಸ್.ಪಾಟೀಲ ಮಾತನಾಡಿದರು.

ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಯ ಸಲಹೆಗಾರ ಪ್ರೊ.ಸಂಗ್ರಾಮ ಎಂಗಳೆ ಸ್ವಾಗತಿಸಿದರು. ಡಾ.ಧನಲಕ್ಷ್ಮಿ ಪಾಟೀಲ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !