ಬುಧವಾರ, ಸೆಪ್ಟೆಂಬರ್ 18, 2019
23 °C
ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಹೇಳಿಕೆ

ಹಕ್ಕು ಅನುಭವಿಸಿ, ಕರ್ತವ್ಯ ಪಾಲಿಸಿ

Published:
Updated:
Prajavani

ಬೀದರ್‌: ‘ಸಂವಿಧಾನದಲ್ಲಿ ಹಕ್ಕುಗಳ ಜತೆಗೆ ದೇಶದ ಪ್ರತಿಯೊಬ್ಬ ನಾಗರಿಕ ಪಾಲಿಸಬೇಕಾದ ಕರ್ತವ್ಯಗಳನ್ನೂ ಉಲ್ಲೇಖಿಸಲಾಗಿದೆ. ಹೀಗಾಗಿ ನಾಗರಿಕರು ಹಕ್ಕು ಅನುಭವಿಸಿದರೆ ಸಾಲದು, ಕರ್ತವ್ಯವನ್ನೂ ಪಾಲಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮೂಲಭೂತ ಕರ್ತವ್ಯಗಳು, ಕಾಯಂ ಲೋಕ ಅದಾಲತ್ ಮತ್ತು ಲೋಕ ಅದಾಲತ್ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ನಾಗರಿಕರಾಗಿರುವ ನಾವು ಸ್ವಲ್ಪ ಮಟ್ಟಿಗಾದರೂ ದೇಶದ ಕಾನೂನು ಬಗ್ಗೆ ಅರಿತುಕೊಳ್ಳಬೇಕಿದೆ. ಈ ಮೂಲಕ ಅಪರಾಧಗಳ ಸಂಖ್ಯೆಯನ್ನು ಇಳಿಮುಖಗೊಳಿಸಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಒಂದು ಕಡೆ ಬರ, ಇನ್ನೊಂದು ಕಡೆ ನೆರೆ ಬಂದಿದೆ. ಪರಿಸರ ಸಂರಕ್ಷಣೆಗೆ ಪ್ರಾಮುಖ್ಯ ನೀಡದ ಕಾರಣ ನೈಸರ್ಗಿಕ ವಿಕೋಪಗಳನ್ನು ಎದುರಿಸಬೇಕಾಗಿದೆ’ ಎಂದರು.

‘ಪ್ರತಿಯೊಬ್ಬರು ತಮ್ಮ ಮನೆಯ ಆವರಣದಲ್ಲಿ ಸಸಿ ನೆಟ್ಟು ಬೆಳೆಸಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಲ್ಲಿಸಬೇಕು. ಬೀದರ್‌ ನಗರಸಭೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಲು ಪ್ರತಿ ಮನೆಗೆ ಪ್ರತ್ಯೇಕ ತೊಟ್ಟಿಗಳನ್ನು ಕೊಡಲಾಗಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಬೇರೆ ಯುವಕನೊಂದಿಗೆ ಹೆಚ್ಚು ಬೆರೆಯದಂತೆ ಬುದ್ಧಿವಾದ ಹೇಳಿದ ತಂದೆಯನ್ನೇ ಯುವತಿಯೊಬ್ಬಳು ಕೊಲೆ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ. ಉತ್ತಮ ಸಂಸ್ಕಾರ ಇಲ್ಲದ ಕಾರಣ ಯುವ ಜನಾಂಗ ದಾರಿ ತಪ್ಪುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಉನ್ನತ ಗುರಿ ಸಾಧಿಸುವ ಛಲದೊಂದಿಗೆ ವಿದ್ಯಾಭ್ಯಾಸ ಮಾಡಬೇಕು. ವಿಶ್ವದ ಇತರ ದೇಶಗಳಿಗೆ ಮಾದರಿಯಂತಿರುವ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ನಗರಸಭೆ ಆಯುಕ್ತ ಬಿ.ಬಸಪ್ಪ ಮಾತನಾಡಿ, ‘ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ. ಪ್ಲಾಸ್ಟಿಕ್‌ ಬಳಕೆಯಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿದೆ. ಅದನ್ನು ವಿಲೇವಾರಿ ಮಾಡುವುದು ಸಹ ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಡಿವೈಎಸ್‌ಪಿ ಬಸವೇಶ್ವರ ಹೀರಾ ಅವರು ಮೂಲಭೂತ ಕರ್ತವ್ಯಗಳ ಕುರಿತು ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ರಾಜಪ್ಪ ವಿ. ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ ವಾಗರಾಜ, ಉಪನ್ಯಾಸಕರಾದ ವಿದ್ಯಾ ಪಾಟೀಲ, ಶ್ರೀನಿವಾಸ ರೆಡ್ಡಿ, ಸಚ್ಚಿದಾನಂದ ರುಮ್ಮಾ ಇದ್ದರು. ಸುಂದರರಾಜ್‌ ಸ್ವಾಗತಿಸಿದರು. ಮನೋಜಕುಮಾರ ನಿರೂಪಿಸಿದರು.

Post Comments (+)