ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿಯರು ಗಟ್ಟಿ ಸಾಹಿತ್ಯ ರಚಿಸಲಿ- ಗುರಮ್ಮ ಸಿದ್ದಾರೆಡ್ಡಿ ಸಲಹೆ

ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ ಸಲಹೆ
Last Updated 27 ಮಾರ್ಚ್ 2023, 12:27 IST
ಅಕ್ಷರ ಗಾತ್ರ

ಬೀದರ್: ‘ಅರ್ಥಪೂರ್ಣ ಕಾವ್ಯ ಹಾಗೂ ಗಟ್ಟಿ ಸಾಹಿತ್ಯ ರಚಿಸುವ ಮೂಲಕ ಲೇಖಕಿಯರು ಪ್ರತಿಭಾವಂತರಾಗಿ ಹೊರ ಹೊಮ್ಮಬೇಕು’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ ಸಲಹೆ ನೀಡಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ಹೋಟಲ್ ಕೃಷ್ಣ ರೆಸಿಡೆನ್ಸಿ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜೈನ ಧರ್ಮದ 19ನೇ ತಿರ್ಥಂಕರರು ಬಾಳಿ ಬದುಕಿದ ಭೂಮಿ ಇದು. ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ರಚಿಸಿದ ಕೀರ್ತಿ ಬೀದರ್ ಜಿಲ್ಲೆಗೆ ಸಲ್ಲುತ್ತದೆ. ಇಂಥ ಪವಿತ್ರ ನೆಲ, ಜಲ ಹಾಗೂ ಸಾಹಿತ್ಯದ ಬಗ್ಗೆ ಅಭಿಮಾನ ಪಡಬೇಕಿದೆ’ ಎಂದು ಹೇಳಿದರು.

‘ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವುಗಳಂತೆಯೇ ಮೌಲಿಕ ಸಾಹಿತ್ಯ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ‘ಲೇಖಕಿಯರ ಸಂಘ ಜಿಲ್ಲೆಯಲ್ಲಿ ಬಲಿಷ್ಠವಾಗುತ್ತ ಹೆಜ್ಜೆ ಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಸಂಘದಿಂದ ಪುಸ್ತಕಗಳನ್ಜು ಪ್ರಕಟಿಸುವ ಕಾರ್ಯವಾಗಬೇಕು’ ಎಂದು
ಹೇಳಿದರು.

‘80 ವರ್ಷ ಮೇಲ್ಪಟ್ಟ ಅದೆಷ್ಟೋ ಗ್ರಾಮೀಣ ಜಾನಪದ ಕಲಾವಿದೆಯರನ್ನು ಗುರುತಿಸಬೇಕಿದೆ. ಅವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಹೊರ ತಂದು ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು’ ಎಂದರು.

ಲೇಖಕಿಯರ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷೆ ಲೀಲಾವತಿ ನಿಂಬೂರೆ ಮಾತನಾಡಿ, ‘ಕೃತಿಗಳ ಅಧ್ಯಯನ ಹಾಗೂ ನಿರಂತರ ಬರವಣಿಗೆಯಿಂದ ಬರಹಗಾರರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪುಸ್ತಕಗಳು ನಮ್ಮ ಆಪ್ತಮಿತ್ರರಾಗಬೇಕು. ಆಗ ವ್ಯಕ್ತಿಯಲ್ಲಿ ಜ್ಞಾನದ ಕೊರತೆ ಕಂಡು ಬರುವುದಿಲ್ಲ’ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಪುಣ್ಯವತಿ ವಿಸಾಜಿ ಮಾತನಾಡಿ, ‘ಮಹಿಳೆಯ ವಾಸ ಇದ್ದ ಕಡೆ ಅಲ್ಲಿ ದೇವತೆಗಳ ವಾಸ ಇರುತ್ತದೆ. ಅಂದು ಮಹಿಳೆಯರು ಕೇವಲ ಭೋಗದ ವಸ್ತು, ಮಕ್ಕಳು ಹೆರುವ ಯಂತ್ರ, ಅಡುಗೆ ಮನೆಯ ಒಡತಿಗೆ ಸೀಮಿತವಾಗಿದ್ದಳು. ಇಂದು ಮನೆಯ ಹೊರಗೂ ದುಡಿದು ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಮೆರೆದಿದ್ದಾಳೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ ಮಾತನಾಡಿ, ‘40 ವರ್ಷಗಳ ಹಿಂದೆ ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಸಂಘ ಇಂದು ನಾಡಿನ ಉದ್ದಗಲಕ್ಕೂ ಬೆಳೆಯುತ್ತಿದೆ. ಲೇಖಕಿಯರ ಸಂಖ್ಯೆ ಇದೀಗ 28ರಿಂದ 55ಕ್ಕೆ ಏರಿದೆ’ ಎಂದು ತಿಳಿಸಿದರು.

‘ಮುಂದಿನ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಒಟ್ಟು 8 ಕೃತಿಗಳನ್ನು ಹೊರ ತರಲು ಸಂಘ ಉದ್ದೇಶಿಸಿದೆ.

ಸಂಘದಿಂದ ಕಮ್ಮಟ ಹಾಗೂ ತರಬೇತಿ ಆಯೋಜಿಸಿ ಉದಯೋನ್ಮುಖ ಬರಹಗಾರರಿಗೆ ಉತ್ತೇಜನ ನೀಡುವ ಕೆಲಸವನ್ನು ಮಾಡಲಿದೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ, ‘ಜಿಲ್ಲೆಯಲ್ಲಿ ಲೇಖಕಿಯರ ಸಂಘ ಹುಟ್ಟು ಹಾಕಿರುವ ಕೀರ್ತಿ ಯಶೋದಮ್ಮ ಸಿದಬಟ್ಟಿ ಅವರಿಗೆ ಸಲ್ಲುತ್ತದೆ. ಸಂಘ ಗ್ರಾಮೀಣ ಪ್ರದೇಶದಲ್ಲೂ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಿದೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯೆ ಪ್ರೊ.ಲೀಲಾವತಿ ಚಾಕೋತೆ, ಉದ್ಯಮಿ ಸುವರ್ಣಾ ಧನ್ನೂರ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಇದ್ದರು. ರೇಖಾ ಸೌದಿ ನಾಡಗೀತೆ ಹಾಡಿದರು. ಶಿಲ್ಪಾ ಮಜಗೆ ಸ್ವಾಗತಿಸಿದರು. ರೂಪಾ ಮರೂರ ನಿರೂಪಿಸಿದರು. ಶಾಂತಮ್ಮ ಬಲ್ಲೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT