ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಸಮ್ಮತ ಚುನಾವಣೆ ನಡೆಸೋಣ: ಜಿಲ್ಲಾಧಿಕಾರಿ

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲನೇ ಹಂತದ ತರಬೇತಿ
Last Updated 7 ಏಪ್ರಿಲ್ 2021, 5:05 IST
ಅಕ್ಷರ ಗಾತ್ರ

ಬೀದರ್‌: ‘ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಯಮಾನುಸಾರ ನಡೆಸಬೇಕು. ಚುನಾವಣೆಗೆ ಸಂಬಂಧಿಸಿದ ಕಾಯ್ದೆ, ನಿಯಮಗಳನ್ನು ತಿಳಿದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸಲಹೆ ಮಾಡಿದರು.

ನಗರದ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಇನ್ನಿತರ ಸಿಬ್ಬಂದಿಗೆ ಆಯೋಜಿಸಿದ್ದ ಮೊದಲನೇ ಹಂತದ ಪೂರ್ವಭಾವಿ ತರಬೇತಿಯಲ್ಲಿ ಅವರು ಮಾತನಾಡಿದರು.

‘ಏ.17ರಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಎಲ್ಲ ಸಿಬ್ಬಂದಿ ಸಿದ್ಧರಿರಬೇಕು. ಬೆಳಗ್ಗೆ 6.30ರೊಳಗೆ ಕನಿಷ್ಠ 50 ಅಣಕು ಮತದಾನ ಮುಗಿಸಬೇಕು. ಬೆಳಿಗ್ಗೆ 7ಕ್ಕೆ ಮತದಾನ ಪ್ರಾರಂಭಿಸಿ ಪ್ರತಿ ಎರಡು ಗಂಟೆಗೊಮ್ಮೆ ಎಷ್ಟು ಮತದಾನ ಆಗಿದೆ ಎಂಬ ಮಾಹಿತಿಯನ್ನು ಪ್ರಿಸೈಡಿಂಗ್ ಅಧಿಕಾರಿಯವರು ಡೈರಿಯಲ್ಲಿ ನಮೂದಿಸಬೇಕು. ಸಂಜೆ 7 ಗಂಟೆಗೆ ಮತದಾನವನ್ನು ಮುಕ್ತಾಯ ಗೊಳಿಸಬೇಕು. ಮತದಾರರು ಇನ್ನೂ ಬಾಕಿ ಇದ್ದಲ್ಲಿ ಸಾಲಿನಲ್ಲಿರುವವರಿಗೆ ಕೊನೆಯಿಂದ ಕ್ರಮ ಸಂಖ್ಯೆ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು’ ಎಂದು ತಿಳಿಸಿದರು.

‘ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ ಮತ್ತು ಮೂರನೇ ಮತಗಟ್ಟೆ ಅಧಿಕಾರಿಗಳು ನಿಗದಿಪಡಿಸಿದ ಮಸ್ಟರಿಂಗ್ ಕೇಂದ್ರದಲ್ಲಿ ಏಪ್ರಿಲ್ 16ರಂದು ಬೆಳಿಗ್ಗೆ 8 ಗಂಟೆಗೆ ಹಾಜರಾಗಿ ಮತಗಟ್ಟೆ ಕೌಂಟರ್‌ಗೆ ಎಲ್ಲಾ ಸಿಬ್ಬಂದಿಯೊಂದಿಗೆ ಹೋಗಿ ಮತಯಂತ್ರ ಮತ್ತು ಇತರೆ ಚುನಾವಣಾ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್ ಯುನಿಟ್‍ಗಳನ್ನು ತಮ್ಮ ಮತಗಟ್ಟೆಗೆ ಸಂಬಂಧಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದರು.

‘ಮತಗಟ್ಟೆ ಕೊಠಡಿಯಲ್ಲಿ ಯಾವುದೇ ಧರ್ಮದ ಮತ್ತು ಇನ್ನಿತರ ಚಿತ್ರಗಳು, ಚಿಹ್ನೆಗಳಿದ್ದಲ್ಲಿ ಅದನ್ನು ತೆರವುಗೊಳಿಸಬೇಕು. ಮತ ಚಲಾಯಿಸುವ ಕಂಪಾರ್ಟ್‌ಮೆಂಟ್ ಸಿದ್ಧಪಡಿಸಿಕೊಳ್ಳಬೇಕು. ಮತದಾನ ಏಜೆಂಟರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಸಬೇಕು’ ಎಂದು ಸೂಚಿಸಿದರು.

‘ಮತಗಟ್ಟೆಯೊಳಗೆ ಮತದಾರರು, ಪೋಲಿಂಗ್ ಆಫೀಸರ್‌ಗಳು, ಚುನಾವಣಾ ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು ಸೇರಿದಂತೆ ಚುನಾವಣಾ ಆಯೋಗದ ನಿರ್ದೇಶನುಸಾರ ಅವಕಾಶ ನೀಡಿದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಬಹುದಾಗಿದೆ’ ಎಂದು ತಿಳಿಸಿದರು.

ರಾಜ್ಯಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಮಾತನಾಡಿ, ‘17ಎ ರಜಿಸ್ಟರ್‌ನಲ್ಲಿ ಪ್ರತಿಯೊಬ್ಬ ಮತದಾರನ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ತೆಗೆದುಕೊಳ್ಳಬೇಕು. ಎಡಗೈ ತೋರು ಬೆರಳಿನ ಉಗುರಿನ ತುದಿಯಿಂದ ಮೊದಲನೇ ಖಂಡಿಕೆಯವರೆಗೆ ಅಳಿಸಲಾಗದ ಶಾಹಿ ಹಾಕಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಉಪ‍ ವಿಭಾಗಾಧಿಕಾರಿ ಗರೀಮಾ ಪನ್ವಾರ್‌, ತಹಶೀಲ್ದಾರ್‌ ಗಂಗಾದೇವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT