ಮಾನ್ಯತೆ ಸಿಗುವವರೆಗೆ ಹೋರಾಟ ನಿಲ್ಲದು

7
ಲಿಂಗಾಯತ ಸಮಾವೇಶ ಮಾಹಿತಿ ಕೇಂದ್ರ ಉದ್ಘಾಟನೆ ವೇಳೆ ಹುಲಸೂರಿನ ಶಿವಾನಂದ ಸ್ವಾಮೀಜಿ

ಮಾನ್ಯತೆ ಸಿಗುವವರೆಗೆ ಹೋರಾಟ ನಿಲ್ಲದು

Published:
Updated:
Deccan Herald

ಬೀದರ್‌: ‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಕಾಮತ್ ಹೋಟೆಲ್ ಎದುರಿನ ರಸ್ತೆಯಲ್ಲಿ ಇರುವ ಡಾ. ರಾಜಶೇಖರ ಕುಲಕರ್ಣಿ ಆಸ್ಪತ್ರೆಯ ಪಕ್ಕದಲ್ಲಿ ಬುಧವಾರ ನಡೆದ ನವದೆಹಲಿಯ ಲಿಂಗಾಯತ ಬೃಹತ್ ಸಮಾವೇಶದ ಮಾಹಿತಿ ಕೇಂದ್ರ ಹಾಗೂ ಲಿಂಗಾಯತ ಸಮನ್ವಯ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ನಡೆಸುತ್ತಿರುವ ಮಠಾಧೀಶರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಡಿಸೆಂಬರ್ 10 ರಿಂದ ಮೂರು ದಿನ ನವದೆಹಲಿಯಲ್ಲಿ ನಡೆಯಲಿರುವ ಲಿಂಗಾಯತ ಬೃಹತ್ ಸಮಾವೇಶದ ಯಶಸ್ವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಲಿದ್ದೇವೆ’ ಎಂದು ತಿಳಿಸಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಈಗಾಗಲೇ ಹಿಂದಿನ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದನ್ನು ಅಂಗೀಕರಿಸಿ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸುವುದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ದೇಶದ ರಾಜಧಾನಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ’
ಎಂದು ಹೇಳಿದರು.

‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದರಿಂದ ರಾಷ್ಟ್ರದ ಅಖಂಡತೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಧರ್ಮದ ಮಾನ್ಯತೆ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ’ ಎಂದು ಕೌಠಾದ ಬಸವಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನುಡಿದರು.

‘ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಲ್ಕಿ ಮಠವು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ನವದೆಹಲಿಯ ಸಮಾವೇಶ ಯಶಸ್ವಿಗೂ ಶಕ್ತಿ ಮೀರಿ ಪ್ರಯತ್ನಿಸಲಿದೆ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಮಠದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ತಿಳಿಸಿದರು.

‘ಡಿಸೆಂಬರ್ 10, 11 ಮತ್ತು 12 ರಂದು ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ ಲಿಂಗಾಯತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೀದರ್‌ ಜಿಲ್ಲೆಯಿಂದ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದಾರೆ’ ಎಂದು ಬೀದರ್‌ ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

‘ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಆಗಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸುವ ಧರ್ಮವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಹಾಗೂ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ಕೊಡಬೇಕು’ ಎಂದು ಆಗ್ರಹಿಸಿದರು.

ಬಸವಗಿರಿಯ ಪ್ರಭುದೇವರು, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಮುಖಂಡ ಶ್ರೀಕಾಂತ ಸ್ವಾಮಿ, ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಮುಖಂಡರಾದ ಸೋಮಶೇಖರ ಪಾಟೀಲ, ಕುಶಾಲರಾವ್ ಪಾಟೀಲ ಖಾಜಾಪುರ, ಬಸವರಾಜ ಪಾಟೀಲ ಹಾರೂರಗೇರಿ, ಶಿವರಾಜ ಪಾಟೀಲ ಅತಿವಾಳ, ಶಂಕರೆಪ್ಪ ಹೊನ್ನಾ, ರಾಜಕುಮಾರ ಪಾಟೀಲ ಬಗದಲ್, ಸಿ.ಎಸ್. ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !